ಉಡುಪಿ ಜಿಲ್ಲೆಯ ಸಿಡಿ ಅನುಪಾತ ರಾಜ್ಯದಲ್ಲಿಯೇ ಅತೀ ಕಡಿಮೆ !

KannadaprabhaNewsNetwork |  
Published : Dec 17, 2025, 03:00 AM IST
ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯ ಬ್ಯಾಂಕುಗಳ ಒಟ್ಟು ಸಾಲ ಮತ್ತು ಠೇವಣಿ (ಸಿ.ಡಿ.) ಅನುಪಾತ ಕಳೆದ ವರ್ಷಕ್ಕಿಂತ ಈ ಆರ್ಥಿಕ ಸಾಲಿನಲ್ಲಿ ಏರಿಕೆಯಾಗಿದ್ದರೂ, ರಾಜ್ಯದಲ್ಲಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಬೆಂಗಳೂರು ಆರ್.ಬಿ.ಐ. ಸಹಾಯಕಿ ಮಹಾಪ್ರಬಂಧಕಿ ನಿಶಾ ಠಾಕೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮನೆ ಕಟ್ಟುವರರ ಸಂಖ್ಯೆ ಇಳಿಕೆ, ಸಾಲಗಾರರ, ಠೇವಣಿದಾರರ ಸಂಖ್ಯೆ ಹೆಚ್ಚಳ

ಮಣಿಪಾಲ: ಜಿಲ್ಲೆಯ ಬ್ಯಾಂಕುಗಳ ಒಟ್ಟು ಸಾಲ ಮತ್ತು ಠೇವಣಿ (ಸಿ.ಡಿ.) ಅನುಪಾತ ಕಳೆದ ವರ್ಷಕ್ಕಿಂತ ಈ ಆರ್ಥಿಕ ಸಾಲಿನಲ್ಲಿ ಏರಿಕೆಯಾಗಿದ್ದರೂ, ರಾಜ್ಯದಲ್ಲಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಬೆಂಗಳೂರು ಆರ್.ಬಿ.ಐ. ಸಹಾಯಕಿ ಮಹಾಪ್ರಬಂಧಕಿ ನಿಶಾ ಠಾಕೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅವರು ಮಂಗಳವಾರ ಇಲ್ಲಿನ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಆರ್.ಬಿ.ಐ. ನಿಯಮಾನುಸಾರ ಜಿಲ್ಲೆಗಳ ಸಿ.ಡಿ ಅನುಪಾತವು ಶೇ. 50 ಕ್ಕಿಂತ ಕಡಿಮೆ ಇರಬಾರದು. ಉಡುಪಿ ಜಿಲ್ಲೆಯ ಸಿ.ಡಿ. ಅನುಪಾತ ಶೇ.48.62 ರಷ್ಟಿದ್ದು, ಇದನ್ನು ಹೆಚ್ಚಿಸಲು ಎಲ್ಲಾ ಬ್ಯಾಂಕ್‌ಗಳೂ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಮಹಾಮಾಯ ಪ್ರಸಾದ್ ರಾಯ್ ಮಾತನಾಡಿ, ಕಳೆದ ವರ್ಷದಲ್ಲಿ ಜಿಲ್ಲೆಯ ಬ್ಯಾಂಕುಗಳ ಸಿ.ಡಿ. ಅನುಪಾತ ಶೇ.47.66 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.48.62 ರಷ್ಟಾಗಿ ಶೇ. 0.96 ರಷ್ಟು ಏರಿಕೆಯಾಗಿದೆ. ಆದರೆ ಈ ಸಿ.ಡಿ ಅನುಪಾತ ಶೇ. 50 ಕ್ಕಿಂತ ಕಡಿಮೆ ಇರುವುದು ವಿಷಾದನೀಯ, ಮುಂದಿನ ದಿನಗಳಲ್ಲಿ ಸಿ.ಡಿ, ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕರ್‌ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಪಂ ಸಿಓಇ ಪ್ರತೀಕ್ ಬಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಪ್ರಬಂಧಕಿ ಸಂಗೀತಾ ಕಾರ್ಥಾ, ಕೆನರಾ ಬ್ಯಾಂಕ್ ಡಿಜಿಎಂ ನಿತ್ಯಾನಂದ ಶೇರಿಗಾರ್ ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಹರೀಶ್ ಜಿ. ಸಭೆಯನ್ನು ನಿರ್ವಹಿಸಿದರು.

ಉಡುಪಿಯಲ್ಲಿ ಜನರು ಮನೆ ಕಟ್ಟುತ್ತಿಲ್ಲವೇ ? ಉಡುಪಿ ಜಿಲ್ಲೆಗೆ ಹಾಲಿ ವರ್ಷದಲ್ಲಿ 510 ಕೋಟಿ ರು. ಗೃಹಸಾಲ ವಿತರಣೆಯ ಗುರಿ ನೀಡಲಾಗಿದೆ. ಆದರೆ ಕೇವಲ 111.43 ಕೋಟಿ ರು. ಸಾಲ ನೀಡಿ ಶೇ 21.85 ಸಾಧನೆ ಮಾಡಲಾಗಿದೆ ಎಂಬ ಬಗ್ಗೆ ವಿವರಣೆ ಕೇಳಿದ ಜಿಪಂ ಸಿಇಓ ಪ್ರತೀಕ್ ಬಾಯಲ್, ಜಿಲ್ಲೆಯಲ್ಲಿ ಜನರು ಮನೆ ಕಟ್ಟುತ್ತಿಲ್ಲವೇ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಮಳೆಗಾಲದಲ್ಲಿ ಮನೆ ಕಟ್ಟುವವರ ಸಂಖ್ಯೆ ಕಡಿಮೆಯಾಗಿತ್ತು, ಜೊತೆಗೆ ಪ್ರಸ್ತುತ ಮನೆ ಕಟ್ಟುವುದಕ್ಕೆ ಅಗತ್ಯ ಮರಳು ಮತ್ತು ಕೆಂಪು ಕಲ್ಲು ಸಿಗದೇ ಮನೆ ಕಟ್ಟುವವರ ಸಂಖ್ಯೆ ಕಡಿಮೆಯಾಗಿದೆ, ಆದ್ದರಿಂದ ಸಾಲ ಪಡೆದು ಮನೆ ಕಟ್ಟುವವರ ಸಂಖ್ಯೆ ಕಡಿಮೆ ಇದೆ ಎಂದು ಸಮಜಾಯಿಸಿ ನೀಡಿದರು.

ಸಾಲಗಾರರು, ಠೇವಣಿದಾರರು ಹೆಚ್ಚಿದ್ದಾರೆ !

ಕಳೆದ ಸಾಲಿಗೆ ಹೋಲಿಸಿದರೆ ಈ ಆರ್ಥಿಕ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬ್ಯಾಂಕುಗಳಿಂದ ಸಾಲ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ 273 ಕೋಟಿ ರು. ಸಾಲ ವಿತರಿಸಿದ್ದರೆ, ಈ ಸಾಲಿನಲ್ಲಿ ಈಗಾಗಲೇ ಶೇ 11.16 ರಷ್ಟು ಅಂದರೆ 2179 ಕೋಟಿ ರು. ನಷ್ಟು ಹೆಚ್ಚು ಸಾಲ ವಿತರಿಸಲಾಗಿದೆ. ಇದೇ ಅವಧಿಯಲ್ಲಿ ಜಿಲ್ಲೆಯ ಬ್ಯಾಂಕುಗಳಲ್ಲಿ ಠೇವಣಿ ಪ್ರಮಾಣ ಕೂಡ ಶೇ 8.85 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಜಿಲ್ಲೆಯ ಬ್ಯಾಂಕುಗಳಲ್ಲಿ 44610 ಕೋಟಿ ರು. ಠೇವಣಿಯಾಗಿದ್ದರೆ, ಹಾಲಿ ವರ್ಷದಲ್ಲಿ 2179 ಕೋಟಿ ರು. ನಷ್ಟು ಹೆಚ್ಚುವರಿ ಠೇವಣಿಯಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ