ಲಕ್ಷ್ಮೇಶ್ವರ: ಹಿಂದೂ ಧರ್ಮದ ಉಳಿವಿಗಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಡೆಯುತ್ತಾ ಬಂದಿದ್ದು. ಗಣೇಶ ಹಬ್ಬವು ನಮ್ಮ ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯ ಮಾಡಲಿ ಎಂದು ಗದಗ ಜಿಲ್ಲಾ ಗಜಾನೋತ್ಸವ ಮಹಾಮಂಡಳಿ ಮಾರ್ಗದರ್ಶಕ ರಾಜು ಖಾನಪ್ಪನವರ ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಭಾರತೀಯರನ್ನು ಒಂದೆಡೆ ಸೇರಲು ಬಿಡುತ್ತಿರಲಿಲ್ಲ. ಈ ವೇಳೆ ಬಾಲಗಂಗಾಧರ ತಿಲಕ್ ಗಣೇಶನ ಹಬ್ಬವನ್ನೇ ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಬಳಸಿಕೊಳ್ಳುವ ಮೂಲಕ ಹಿಂದೂ ಸಮಾಜದ ಎಲ್ಲರನ್ನು ಒಂದೆ ವೇದಿಕೆಯಡಿ ತರಲು ಗಣೇಶನ ಹಬ್ಬಸೂಕ್ತ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅದುವರೆಗೂ ಮನೆಯಲ್ಲಿಯೇ ಆಚರಣೆಯಲ್ಲಿದ್ದ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಹೊರ ತಂದು ಪ್ರತಿಷ್ಠಾಪಿಸುವ ಹೊಸ ಪರಂಪರೆ ಹುಟ್ಟು ಹಾಕಿದರು. ಧರ್ಮದ ಉಳಿವಿಗಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಂಡಳಿ ಸ್ಥಾಪನೆ ಮಾಡಿದರು, ಮಹಾಮಂಡಳಿ ಉದ್ದೇಶ ಹಿಂದೂ ಸಮಾಜದಲ್ಲಿ ಎಲ್ಲರು ಸಮಾನರು ಎಂದು ತೋರಿಸುವ ಉದ್ದೇಶ ಹೊಂದಿದೆ. ಗಣೇಶನ ವಿಸರ್ಜನೆ ಒಂದೇ ದಿನ ನಡೆಯಬೇಕು, ಒಂದೆ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬರಬೇಕು, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಗಣೇಶೋತ್ಸವ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸ್ವಾತಂತ್ರ ಹೋರಾಟಗಾರರ ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ ನಡೆಸಲು ಸಂಘಟಕರಿಗೆ ಸಲಹೆ ನೀಡಿದರು.
ಶ್ರೀರಾಮ ಸೇನಾ ತಾಲೂಕು ಸಂಚಾಲಕ ಈರಣ್ಣ ಪೂಜಾರ ಮಾತನಾಡಿ, ಹಿಂದೂ ಧರ್ಮದಲ್ಲಿ ಶಿಸ್ತು ಸಮಯ ಪ್ರಜ್ಞೆ ಬರಲಿ, ಹಿಂದೂ ಧರ್ಮ ಉಳಿವಿಗಾಗಿ ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡುವ ಸಲುವಾಗಿ ಗಜಾನೋತ್ಸವ ಮಹಾಮಂಡಳಿ ರಚನೆಯ ಉದ್ದೇಶ ಹೊಂದಿದ್ದು ಒಗ್ಗಟ್ಟು ಪ್ರದರ್ಶನ ಮಾಡೋಣ ಎಂದು ಹೇಳಿದರು.ಡಿಎಸ್ಎಸ್ ಜಿಲ್ಲಾ ಸಂಚಾಲಕ ಸುರೇಶ ನಂದೆಣ್ಣವರ ಹಾಗೂ ಮಂಜುನಾಥ ಹೊಗೆಸೊಪ್ಪಿನ ಮಾತನಾಡಿ, ದೇವರಲ್ಲಿ ಪ್ರಥಮ ಪೂಜೆ ಗಣೇಶಗೆ ಸಲ್ಲುತ್ತದೆ, ಗಣೇಶ ವಿಸರ್ಜನೆ ಸಮಯದಲ್ಲಿ ಗಣೇಶ ನಾಮ ಸ್ಮರಣೆಗಳಿಂದ ಮೊಳಗಬೇಕು. ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಒಳ್ಳೆಯ ವಿಚಾರವಂತರು ಮಹಾಮಂಡಳಿ ಜವಾಬ್ದಾರಿ ಹೊರಬೇಕು, ಎಲ್ಲರು ಗಜಾನೋತ್ಸವದಲ್ಲಿ ಭಾಗಿಯಾಗಿ ಎಲ್ಲರಿಗೂ ಪ್ರೇರಣೆ ಆಗಬೇಕು ಎಂದು ಹೇಳಿದರು.