ಹುಬ್ಬಳ್ಳಿ: ಬಸ್ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರವೇ ನೇರ ಕಾರಣ. ಈ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ಸಂಸ್ಥೆಯಲ್ಲಿ ನಿತ್ಯ 1.16 ಕೋಟಿಗೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ 65 ಲಕ್ಷ ಜನ ಹೆಣ್ಣು ಮಕ್ಕಳಿದ್ದಾರೆ. ಅದರ ಜತೆಗೆ 5,300 ಹೊಸ ಬಸ್ ಖರೀದಿ ಮಾಡಲಾಗಿದೆ. 8000 ಹೊಸ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಈಗಾಗಲೇ 4-5 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ, ದರ ಏರಿಕೆ ಮಾಡಲಾಗಿದೆ ಎಂದರು.ಚರ್ಚೆಗೆ ನಾವು ಸಿದ್ಧ:
ಬಿಜೆಪಿಯವರು ದರ ಏರಿಕೆ ಕುರಿತು ಸುಮ್ಮನೆ ಮಾತನಾಡುತ್ತಿದ್ದಾರೆ. ಅವರು ಚರ್ಚೆಗೆ ಬಂದರೆ ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಡೀಸೆಲ್ ಅನ್ನು ₹30ರಿಂದ ₹40ಕ್ಕೆ ಕೊಡಬಹುದು. ಈ ಹಿಂದೆ ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ₹103 ಡಾಲರ್‌ಗೆ 1 ಬ್ಯಾರಲ್ ಇಂಧನ ಖರೀದಿ ಮಾಡುತ್ತಿದ್ದರು. ₹90 ಸಾವಿರ ಕೋಟಿ ಸಬ್ಸಿಡಿ ಕೊಡುತ್ತಿದ್ದರು. ಇಂಧನ ಬೆಲೆ ಜಾಸ್ತಿಯಾದಾಗ ಎಲ್ಲ ವಸ್ತುಗಳ ಬೆಲೆ ಗಗನಕ್ಕೆರುತ್ತವೆ. ಸಾಗಾಟ ವೆಚ್ಚ ಜಾಸ್ತಿಯಾದಾಗ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಬೀರುತ್ತದೆ ಎಂದರು.2004ರಿಂದ 2014ರ ವರೆಗೆ ₹60 ರಿಂದ ₹65 ಕ್ಕೆ ಇಂಧನ ಬೆಲೆ ಇತ್ತು. ಸದ್ಯ ಜಾಗತಿಕವಾಗಿ ಇಂಧನ ಬೆಲೆ ಇಳಿದಿದೆ. ನಮ್ಮ ದೇಶದಲ್ಲಿ ಸದ್ಯ ₹25-30ಕ್ಕೆ ಡೀಸೆಲ್, ಪೆಟ್ರೋಲ್ ಕೊಡಬಹುದು. ರಿಲಯನ್ಸ್ ಪೆಟ್ರೋಲ್ ಬಂಕ್ ಉಳಿಸಬೇಕು ಎನ್ನುವ ಉದ್ದೇಶದಿಂದ ಪ್ರಧಾನಿಗಳು ಕೊಡುತ್ತಿಲ್ಲ. ಕೇಂದ್ರದಲ್ಲಿ ಸಬ್ಸಿಡಿ ಜಾಸ್ತಿ ಮಾಡಿದರೆ, ರಿಲಯನ್ಸ್ ಪೆಟ್ರೋಲ್ ಬಂಕ್ ನಮ್ಮೊಂದಿಗೆ ಸ್ಪರ್ಧೆ ಮಾಡಲಾಗುವುದಿಲ್ಲ. ಮನಮೋಹನ ಸಿಂಗ್ ಕೊಟ್ಟಂತಹ ಸಬ್ಸಿಡಿ ಕೊಟ್ಟರೆ ಭಾರತದಲ್ಲಿರುವಂತಹ ರಿಲಯನ್ಸ್ ಬಂಕ್‌ಗಳೆಲ್ಲ ಮುಚ್ಚಿ ಹೋಗುತ್ತವೆ. ಕೇಂದ್ರ ಸಬ್ಸಿಡಿ ಕೊಟ್ಟರೆ ವಸ್ತುಗಳ ಬೆಲೆ ಕಡಿಮೆಯಾಗುತ್ತವೆ ಎಂದರು.
ಬಿಜೆಪಿ ಕೊಳ್ಳೆ ಹೊಡೆಯುತ್ತಿದೆಎಲ್ಲದಕ್ಕೂ ಪ್ರತಿಭಟನೆ ಮಾಡುವ ಬಿಜೆಪಿಯವರು ಜಿಎಸ್‌ಟಿಗಾಗಿ ಏಕೆ ಪ್ರತಿಭಟನೆ ಮಾಡುತ್ತಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೈ ಪ್ಯಾಜ್ ನಹಿ ಖಾತಿ ಹೂಂ ಎಂದು ಹೇಳಿದ್ದರು. ಕೇಂದ್ರ ಹಣಕಾಸು ಸಚಿವರು ಹೀಗೆ ಹೇಳಬಹುದೇ? ಬಿಜೆಪಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ತೈಲಬೆಲೆ ಇಳಿಸಿ: ನಾವು ಉಚಿತವಾಗಿ ಏನನ್ನಾದ್ರೂ ಕೊಡುತ್ತಿದ್ದೇವೆ. ಬಿಜೆಪಿಯವರು ಏನು ಕೊಟ್ಟಿದ್ದಾರೆ? ಮೋದಿ ಕಿ ಗ್ಯಾರಂಟಿ ಅಂತ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದಾರಲ್ಲ? ಇದನ್ನು ಯಾರು ಕೊಟ್ಟಿದ್ದು? ಈ ದೇಶದಲ್ಲಿ ₹1.10 ಲಕ್ಷ ಕೋಟಿ ಕೇಂದ್ರದ ಬಜೆಟ್‌ನಲ್ಲಿಟ್ಟು ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಬಿಜೆಪಿಯವರು ₹2 ಸಬ್ಸಿಡಿ ಕೊಟ್ಟು, ₹20 ಸಾವಿರ ಕೋಟಿ ಪ್ರಚಾರ ತೆಗೆದುಕೊಂಡರು. ಕೇಂದ್ರ ಸರ್ಕಾರ ತೈಲ ದರ ಇಳಿಸಿದರೆ, ಬಸ್ ದರ ತಾನಾಗಿಯೇ ಇಳಿಯುತ್ತದೆ ಎಂದರು.ಔತಣಕೂಟಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ: ಲಾಡ್ಹುಬ್ಬಳ್ಳಿ:
ಸಚಿವ ಸಂಪುಟ ಸಭೆ ಆದ ಬಳಿಕ ಊಟಕ್ಕೆ ಕರೆಯುತ್ತಾರೆ. ಅದೇ ರೀತಿ ಸಚಿವ ಸತೀಶ ಜಾರಕಿಹೊಳಿ ಅವರು ಊಟಕ್ಕೆ ಕರೆದಿದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಿರ್ಧಾರ ಸಚಿವ, ಶಾಸಕರು ಮಾಡುತ್ತಾರೆಯೇ? ಅದೇನಿದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಸಚಿವ ಸಂಪುಟ ಸಭೆ ಆದ ಬಳಿಕ ಸಚಿವ ಜಾರಕಿಹೊಳಿ ಅವರು ಔತಣಕೂಟ ಏರ್ಪಡಿಸಿದ್ದರು. ಹೋಗಿ ಊಟ ಮಾಡಿದ್ದೇವೆ. ಅಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಗ್ಗೆ ಚರ್ಚೆ ನಡೆಯಿತು ಎಂಬುದೆಲ್ಲ ಮಾಧ್ಯಮ ಸೃಷ್ಟಿ ಎಂದರು.
ಎಲ್‌ಆರ್‌ಟಿಗೆ ಚಿಂತನೆ:ಹು-ಧಾ ನಡುವೆ ಬಿಆರ್‌ಟಿಎಸ್ ಬದಲಿಗೆ ಲಘು ರೈಲು ಸಾರಿಗೆ (ಎಲ್‌ಆರ್‌ಟಿ) ಮಾದರಿ ಪರಿಚಯಿಸುವ ಕುರಿತು ಚಿಂತನೆ ನಡೆದಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಬೇಕು, ಹೂಡಿಕೆ, ನಿರ್ವಹಣೆಯ ಎಲ್ಲ ಜವಾಬ್ದಾರಿಯನ್ನು ಅವರೇ ನಿರ್ವಹಿಸಬೇಕು ಎಂಬ ಕುರಿತು ಮಾತುಕತೆ ನಡೆದಿದೆ ಎಂದರು.
ಫ್ರಾನ್ಸ್‌ನಲ್ಲಿರುವ ಲೈಟ್ ಟ್ರಾಮ್ ವಾಹನ ತಯಾರಿಕೆ ಕಂಪನಿಗೆ (ಎಚ್‌ಇಎಸ್‌ಎಸ್) ಈಚೆಗೆ ಭೇಟಿ ನೀಡಿ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಅವರು ಬಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ನಂತರ ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.