ಕೊಪ್ಪಳದ ಹುಲಿಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ವರ್ಷದಿಂದ ವರ್ಷಕ್ಕೆ ಹುಲಿಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಅದರಲ್ಲೂ ಕಳೆದ ನಾಲ್ಕಾರು ವರ್ಷಗಳಿಂದ ಈ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿರುವುದರಿಂದ ಇರುವ ರೈಲ್ವೆ ಗೇಟ್ ದಾಟುವುದೇ ದೊಡ್ಡ ಸಾಹಸವಾಗಿತ್ತು. ಇದು ಟ್ರಾಫಿಕ್ ಸಮಸ್ಯೆಗೂ ಕಾರಣವಾಗುತ್ತಿತ್ತು. ಈಗ ಇಲ್ಲಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ರೇಲ್ವೆ ಇಲಾಖೆ ಅಸ್ತು ಎಂದಿದೆ.

ಸುಮಾರು ₹25 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಇನ್ನೇನು ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

ಬಹು ವರ್ಷಗಳ ಬೇಡಿಕೆ: ವರ್ಷದಿಂದ ವರ್ಷಕ್ಕೆ ಹುಲಿಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಅದರಲ್ಲೂ ಕಳೆದ ನಾಲ್ಕಾರು ವರ್ಷಗಳಿಂದ ಈ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಈಗ ವಾರದ ದಿನವಾದ ಮಂಗಳವಾರ ಮತ್ತು ಶುಕ್ರವಾರ 20-50 ಸಾವಿರ ಭಕ್ತರು ಆಗಮಿಸುವುದು ಸರ್ವೆ ಸಾಮಾನ್ಯ. ಇನ್ನು ಹುಣ್ಣಿಮೆಯ ವೇಳೆಯಲ್ಲಿ 2-5 ಲಕ್ಷದವರೆಗೂ ಭಕ್ತರು ಆಗಮಿಸುತ್ತಾರೆ.

ಹೀಗಾಗಿ, ಇಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಅದರಲ್ಲೂ ಹುಲಿಗಿ ರಸ್ತೆಗೆ ಅಡ್ಡಲಾಗಿರುವ ರೈಲ್ವೆ ಗೇಟ್ ದೊಡ್ಡ ಸಮಸ್ಯೆಯಾಗಿತ್ತು. ರೈಲ್ವೆ ಗೇಟ್ ಹಾಕಿದರೆ ಕಿ.ಮೀ. ಗಟ್ಟಲೇ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.

ಪ್ರತಿಭಟನೆ: ರೈಲ್ವೆ ಗೇಟ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹಲವಾರು ಬಾರಿ ಪ್ರತಿಭಟನೆ ನಡೆಸಲಾಗಿದ್ದನ್ನು ಸ್ಮರಿಸಬಹುದು. ಖುದ್ದು ಸಚಿವರೇ ರೈಲ್ವೆ ಗೇಟ್ ನಲ್ಲಿ ಸಿಕ್ಕಿಹಾಕಿಕೊಂಡಾಗ ಸ್ಥಳೀಯರು ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ವಾಗ್ಯುದ್ದಕ್ಕೂ ಕಾರಣವಾಗಿತ್ತು. ನೀವು ಒಮ್ಮೆ ಸಿಲುಕಿ ಹಾಕಿಕೊಂಡರೆ ಇಷ್ಟು ಸಮಸ್ಯೆಯಾಗುತ್ತದೆ. ಆದರೆ, ನಾವು ನಿತ್ಯ ಈ ತೊಂದರೆ ಎದುರಿಸಬೇಕು ಎಂದು ಸಾರ್ವಜನಿಕರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.

25 ಕೋಟಿ ರುಪಾಯಿ: ಈಗ ಕೇಂದ್ರ ರೈಲ್ವೆ ಇಲಾಖೆ ಹುಲಿಗಿ ಗ್ರಾಮದ ರೈಲ್ವೆ ಗೇಟ್ ನಿರ್ಮಾಣಕ್ಕೆ ₹25 ಕೋಟಿ ವೆಚ್ಚದ ಯೋಜನೆಗೆ ಅಸ್ತು ಎಂದಿದೆ. ಹಣವನ್ನು ಸಹ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ನಡೆದು, ನಿರ್ಮಾಣಕ್ಕೆ ಅನುಮತಿ ಪತ್ರ ನೀಡಲಾಗಿದೆ. ಹೀಗಾಗಿ, ಇನ್ನೇನು ಕೆಲವೇ ದಿನಗಳಲ್ಲಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ. ಇದರಿಂದ ಹುಲಿಗಿ ಗ್ರಾಮದ ಜನರು ಅಷ್ಟೇ ಅಲ್ಲ, ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೂ ಅನುಕೂಲವಾಗಲಿದೆ.

ರೇಲ್ವೆ ಮೇಲ್ಸೇತುವೆ, ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಅಪಾಯಗಳನ್ನು ತಪ್ಪಿಸಲಾಗುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಂಚಾರ ದಟ್ಟಣೆ ಇರುವುದರಿಂದ ಮುನ್ನೆಚರಿಕೆಯಿಂದ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಹುಲಿಗೆಮ್ಮ ದೇವಸ್ಥಾನಕ್ಕೆ ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ನಿತ್ಯವೂ ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ಇಲ್ಲಿರುವ ರೈಲ್ವೆ ಗೇಟ್ ಗೆ ಸೇತುವೆ ನಿರ್ಮಾಣದ ಬೇಡಿಕೆ ಬಹುವರ್ಷಗಳಿಂದ ಇತ್ತು. ಈಗ ಕೇಂದ್ರ ಸರ್ಕಾರ ₹25 ಕೋಟಿಯ ಯೋಜನೆಗೆ ಅಸ್ತು ಎಂದಿದ್ದು, ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು ಎನ್ನುತ್ತಾರೆ ಕೊಪ್ಪಳ ಸಂಸದ ಸಂಗಣ್ಣ ಕರಡಿ.

Share this article