ಬಡವರ ಹಕ್ಕು ಮನರೇಗಾ ಬದಲಿಸಿದ ಕೇಂದ್ರ

KannadaprabhaNewsNetwork |  
Published : Jan 21, 2026, 02:30 AM IST
ಮನರೇಗಾ ಬದಲಿಸಿ ವಿಬಿ-ಜಿ-ರಾಮ್‌ಜಿ ಯೋಜನೆಯಾಗಿ ಪರಿವರ್ತಿಸಿರುವುದು ಹಾಗೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ಮನರೇಗಾ ಯೋಜನೆಯ ಮೂಲ ಉದ್ದೇಶವೇ ಮಾನವ ಶ್ರಮಕ್ಕೆ ಗೌರವ ನೀಡುವುದು ಮತ್ತು ಗ್ರಾಮೀಣ ಬಡವರಿಗೆ ಆರ್ಥಿಕ ಭದ್ರತೆ ಒದಗಿಸುವುದು. ಆದರೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ತಾಂತ್ರಿಕತೆಯ ಹೆಸರಿನಲ್ಲಿ ಗುತ್ತಿಗೆದಾರರಿಗೆ ಮತ್ತು ಜೆಸಿಬಿ ಯಂತ್ರಗಳಿಗೆ ಅವಕಾಶ ನೀಡುತ್ತಿದೆ.

ಧಾರವಾಡ:

ಗ್ರಾಮೀಣ ಭಾಗದ ಶ್ರಮಿಕ ವರ್ಗದ ಹೊಟ್ಟೆ ತುಂಬಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯನ್ನು ಕೇಂದ್ರ ಸರ್ಕಾರ ಬದಲಿಸಿದ್ದು, ಬಡವರ ಜೀವನಕ್ಕೆ ಪಟ್ಟು ನೀಡಿದಂತಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮನರೇಗಾ ಬದಲಿಸಿ ವಿಬಿ-ಜಿ-ರಾಮ್‌ಜಿ ಯೋಜನೆಯಾಗಿ ಪರಿವರ್ತಿಸಿರುವುದು ಹಾಗೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಮನರೇಗಾ ಯೋಜನೆಯ ಮೂಲ ಉದ್ದೇಶವೇ ಮಾನವ ಶ್ರಮಕ್ಕೆ ಗೌರವ ನೀಡುವುದು ಮತ್ತು ಗ್ರಾಮೀಣ ಬಡವರಿಗೆ ಆರ್ಥಿಕ ಭದ್ರತೆ ಒದಗಿಸುವುದು. ಆದರೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ತಾಂತ್ರಿಕತೆಯ ಹೆಸರಿನಲ್ಲಿ ಗುತ್ತಿಗೆದಾರರಿಗೆ ಮತ್ತು ಜೆಸಿಬಿ ಯಂತ್ರಗಳಿಗೆ ಅವಕಾಶ ನೀಡುತ್ತಿದೆ. ಇದರಿಂದ ಹಳ್ಳಿಯ ಬಡ ಜನರಿಗೆ ಉದ್ಯೋಗವಿಲ್ಲದಂತಾಗಿದೆ. ಅಧಿಕಾರಿಗಳು ಕಾಂಟ್ರಾಕ್ಟರ್‌ಗಳ ಜತೆ ಶಾಮೀಲಾಗಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು, ಜಿಲ್ಲೆಯಲ್ಲಿ 140 ಗ್ರಾಪಂಗಳಲ್ಲಿ ದುಡಿಯುವ ವರ್ಗದ ಮಹಿಳೆಯರ ಮಕ್ಕಳ ಲಾಲನೇ ಪಾಲನೆಗಾಗಿ ಸಲಹುವ ಕೂಸಿನ ಮನೆಯ ಸಹಾಯಕರಿಗೆ ನರೇಗಾ ಯೋಜನೆಯಲ್ಲಿಯೇ ಕೂಲಿ ಹಣ ನೀಡಲು ಅವಕಾಶವಿತ್ತು, ಆದರೆ, ಹೊಸ ಮಸೂದೆಯಲ್ಲಿ ಅವಕಾಶವಿಲ್ಲದಂತಾಗಿದ್ದು, ಕೂಸಿನ ಮನೆ ಕೇಂದ್ರಗಳು ಮುಚ್ಚುತ್ತಿರುವುದು ವಿಪರ್ಯಾಸ ಎಂದರು. ವೇದಿಕೆಯಲ್ಲಿಯೇ ಹೆಬ್ಬಳ್ಳಿ ಹಾಗೂ ನಿಗದಿಯ ಭಜನಾ ತಂಡಗಳಿಂದ ಭಜನೆ ನಡೆದಿದ್ದು ವಿಶೇಷ.

ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಬಡವರ ಹಕ್ಕನ್ನು ಕಸಿದುಕೊಳ್ಳುವ ಕೇಂದ್ರ ಬಿಜೆಪಿ ಸರ್ಕಾರದ ಈ ಜನವಿರೋಧಿ ನೀತಿಯನ್ನು ಯಾರೂ ಸಹಿಸುವುದಿಲ್ಲ. ಈಗಾಗಲೇ ರಾಜ್ಯದ ಎಲ್ಲ ಗ್ರಾಪಂಗಳು ಹೊಸ ಮಸೂದೆ ವಿರೋಧಿಸಿ ಠರಾವು ಮಾಡುತ್ತಿದ್ದು, ಕೂಡಲೇ ಈ ಆದೇಶಗಳನ್ನು ಹಿಂಪಡೆದು ಬಡವರಿಗೆ ನ್ಯಾಯ ಒದಗಿಸದಿದ್ದರೆ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರ ಶಿವಳ್ಳಿ, ಚನ್ನಬಸಪ್ಪ ಮಟ್ಟಿ, ಸಿದ್ದಣ್ಣ ಪ್ಯಾಟಿ, ರಾಜು ಕಮತಿ, ಬಸವರಾಜ ಹೆಬ್ಳಳ್ಳಿ, ಶಿವು ಮೆಣಸಿನಕಾಯಿ, ನವೀನ ಕದಂ, ಪರಮೇಶ್ವರ ಕಾಳೆ, ಬಸವರಾಜ ಜಾಧವ, ಈರಣ್ಣ ಮರಗಾಲ ಹಾಗೂ ಪಕ್ಷದ ಮುಖಂಡರಿದ್ದರು.

ನಾನೇನೂ ಜಿಪಿಎ ಹೋಲ್ಡರ್‌ ಅಲ್ಲ..

ಗ್ರಾಮೀಣ ಶಾಸಕರು ಕ್ಷೇತ್ರಕ್ಕೆ ಬರದಂತೆ ಕೆಲವರು ಯೋಜನೆ ರೂಪಿಸಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸಮಯದಲ್ಲಿ ಅವರ ಪರವಾಗಿ ನನಗೆ ಜಿಪಿಎ ಹೋಲ್ಡರ್‌ ಎಂದೆಲ್ಲಾ ಛೇಡಿಸಿದ್ದು ಉಂಟು. ಆದರೆ, ನಾನೇನು ಜಿಪಿಎ ಹೋಲ್ಡರ್ ಅಲ್ಲ. ನಿಗಮ ಮಂಡಳಿ ಅಧ್ಯಕ್ಷರಾಗಿದ್ದೇನೆ. ನಮಗಾದ ಅನ್ಯಾಯದಂತೆ ಬೇರೆ ಯಾರಿಗಾದರೂ ಆಗಿದ್ದರೆ ಗಂಟು ಮೂಟೆ ಕಟ್ಟಿ ಊರು ಬಿಡುತ್ತಿದ್ದರು. ಆದರೆ, ನಾವು ಎಲ್ಲವನ್ನು ಎದುರಿಸಿದ್ದೇವೆ. ಅದಕ್ಕೆಲ್ಲಾ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ ಎಂದು ಶಿವಲೀಲಾ ಕುಲಕರ್ಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ