ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಅರಣ್ಯ ಸಚಿವ ಭೂಪೇಂದ್ರ ಯಾದವ್ ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ವೃಕ್ಷಲಕ್ಷ ಆಂದೋಲನ, ಬೇಡ್ತಿ ಸಮಿತಿ, ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ನಿಯೋಗವು ಅತಿ ಸೂಕ್ಷ್ಮವಾದ ಪಶ್ಚಿಮ ಘಟ್ಟ, ಮತ್ತು ಅಲ್ಲಿನ ಪರಿಸರದ ಮೇಲೆ ಈ ಯೋಜನೆಗಳಿಂದ ಬೀರಬಹುದಾದ ಪರಿಣಾಮಗಳ ಕುರಿತು ವಿವರ ಮಾಹಿತಿ ಒದಗಿಸಿ, ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ ಸಂದರ್ಭದಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಅರಣ್ಯ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಬೇಕು ಮತ್ತು ನುರಿತ ಅಧಿಕಾರಿಗಳ ತಂಡದಿಂದ ಈ ಪ್ರದೇಶದಲ್ಲಿ ಅಧ್ಯಯನ ಮಾಡಿಸಬೇಕು ಎಂದು ಈ ಸಂದರ್ಭದಲ್ಲಿ ನಿಯೋಗದ ಸದಸ್ಯರು ಮನವಿ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಸಚಿವರು, ಫೆಡರಲ್ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಪಶ್ಚಿಮ ಘಟ್ಟದ ನದಿ ಕಣಿವೆಗಳ ಉಳಿವಿನ ವಿಚಾರದಲ್ಲಿ ಸರ್ಕಾರ ಮತ್ತು ಜನ ಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಬಾರದು. ಬೇಕಾ ಬಿಟ್ಟಿ ಯೋಜನೆಗಳಿಂದಾಗಿ ಈ ಪ್ರದೇಶದಲ್ಲಿ ಭಾರೀ ಭೂ ಕುಸಿತ, ಜಲ ಸಂಕಷ್ಟ ಎದುರಾಗುತ್ತಿದ್ದು, ಸಹ್ಯಾದ್ರಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಶರಾವತಿ, ಕಾವೇರಿ, ಬೇಡ್ತಿ-ಅಘನಾಶಿನಿ, ಕಾಳಿ ಕಣಿವೆಗಳ ಅರಣ್ಯ, ಜೀವವೈವಿಧ್ಯ ಅತಿ ಅಮೂಲ್ಯ ಎಂದು ಅಭಿಪ್ರಾಯಪಟ್ಟರು.
ನಿಯೋಗದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಶಾಂತಾರಾಂ ಸಿದ್ಧಿ, ವೃಕ್ಷಲಕ್ಷ ಆಂದೊಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವನ್ಯಜೀವಿ ತಜ್ಞ ಡಾ. ಬಾಲಚಂದ್ರ ಸಾಮನೆ, ಬೇಡ್ತಿ ಸಮಿತಿ ಸಂಚಾಲಕ ನಾರಾಯಣ ಗಡೀಕೈ ಮುಂತಾದವರಿದ್ದರು.