ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕೇಂದ್ರ ಕಾರಣ: ಕೃಷಿ ಇಲಾಖೆ ಸ್ಪಷ್ಟನೆ

KannadaprabhaNewsNetwork |  
Published : Jul 29, 2025, 01:01 AM IST
ಗೊಬ್ಬರ | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮಾತ್ರ ಆರಂಭಿಕ ಶಿಲ್ಕು ಪರಿಗಣಿಸಿ, ಕೇಂದ್ರ ಸರ್ಕಾರದಿಂದ ರಸಗೊಬ್ಬರ ಹಂಚಿಕೆ ಮತ್ತು ಸರಬರಾಜು ಪ್ರಕ್ರಿಯೆ ಜರುಗಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಪ್ರಾರಂಭಿಕ ದಾಸ್ತಾನನ್ನು ಪರಿಗಣಿಸಿ, ಯೂರಿಯಾ ರಸಗೊಬ್ಬರದ ಕಡಿಮೆ ಹಂಚಿಕೆ ಮಾಡಿರುವುದು ಕೊರತೆಗೆ ಮೂಲ ಕಾರಣವಾಗಿದೆ.

ಧಾರವಾಡ: ಧಾರವಾಡ ಸೇರಿದಂತೆ ರಾಜ್ಯದಲ್ಲಿ ವಿವಿಧ ರಸಗೊಬ್ಬರ ಕೊರತೆ ಆಗಲು ಕೇಂದ್ರ ಸರ್ಕಾರವೇ ಕಾರಣ ಎಂದು ರಾಜ್ಯ ಕೃಷಿ ಇಲಾಖೆ ಆರೋಪಿಸಿದೆ.

ಆರಂಭಿಕ ಶಿಲ್ಕು (ಸಂಗ್ರಹ) ಪರಿಗಣಿಸದೇ ರಾಜ್ಯಕ್ಕೆ ಕೊರತೆಯಾಗಿರುವ 81,000 ಮೆಟ್ರಿಕ್‌ ಟನ್ ಡಿಎಪಿ ಮತ್ತು 1,45,000 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಕೇಂದ್ರ ಸರ್ಕಾರವು ಪೂರೈಸಿದಲ್ಲಿ ರೈತರ ಬವಣೆ ನೀಗಿಸಬಹುದಾಗಿದೆ ಎಂದು ಕೃಷಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶಿಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ ಎಲ್ಲ ರಸಗೊಬ್ಬರಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮತ್ತು ಸರಬರಾಜು ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಕಂಡು ಬಂದಿಲ್ಲ. ಪ್ರಸಕ್ತ ಸಾಲಿನಲ್ಲಿ ಮಾತ್ರ ಆರಂಭಿಕ ಶಿಲ್ಕು ಪರಿಗಣಿಸಿ, ಕೇಂದ್ರ ಸರ್ಕಾರದಿಂದ ರಸಗೊಬ್ಬರ ಹಂಚಿಕೆ ಮತ್ತು ಸರಬರಾಜು ಪ್ರಕ್ರಿಯೆ ಜರುಗಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಪ್ರಾರಂಭಿಕ ದಾಸ್ತಾನನ್ನು ಪರಿಗಣಿಸಿ, ಯೂರಿಯಾ ರಸಗೊಬ್ಬರದ ಕಡಿಮೆ ಹಂಚಿಕೆ ಮಾಡಿರುವುದು ಕೊರತೆಗೆ ಮೂಲ ಕಾರಣವಾಗಿದೆ ಎಂದು ಹೇಳಿದೆ.

ಬೇಡಿಕೆಯಂತೆ ಪೂರೈಸಿಲ್ಲ: ರಾಜ್ಯದ ಬೆಳೆ ಪದ್ಧತಿಯನ್ನು ಆಧರಿಸಿ ಮುಂಗಾರು ಹಂಗಾಮಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಕ್ಕೆ 12.95 ಲಕ್ಷ ಮೆಟ್ರಿಕ್‌ ಟನ್ ಯೂರಿಯಾ ರಸಗೊಬ್ಬರ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದಿಂದ 11.17 ಲಕ್ಷ ಮೆಟ್ರಿಕ್‌ ಟನ್ ಹಂಚಿಕೆ ನಿಗದಿಪಡಿಸಿದೆ. ಏಪ್ರಿಲ್ ತಿಂಗಳಿಂದ ಜುಲೈ ವರೆಗೆ 3.02 ಲಕ್ಷ ಮೆ.ಟನ್ ಡಿಎಪಿ ರಸಗೊಬ್ಬರದ ಬೇಡಿಕೆ ಇದ್ದು, ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ 2.21 ಲಕ್ಷ ಮೆ.ಟನ್ ಸರಬರಾಜಾಗಿದ್ದು, 81,000 ಮೆ.ಟನ್ ಸರಬರಾಜು ಬಾಕಿ ಇರುತ್ತದೆ. ರಾಜ್ಯದಲ್ಲಿ ಡಿಎಪಿ ಕೊರತೆ ಕಂಡು ಬಂದಾಗ ಕೃಷಿ ಸಚಿವರ ನಿರ್ದೇಶನದಂತೆ ಪರ್ಯಾಯ ರಸಗೊಬ್ಬರಗಳ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸಿ, ಪ್ರಸ್ತುತ, ಡಿಎಪಿ ರಸಗೊಬ್ಬರದ ಕೊರತೆಯನ್ನು ನೀಗಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು, ಏಪ್ರಿಲ್ ತಿಂಗಳಿಂದ ಜುಲೈ ವರೆಗೆ 6.80 ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ 5.35 ಲಕ್ಷ ಮೆ.ಟನ್ ಸರಬರಾಜಾಗಿದ್ದು, ಇನ್ನೂ 1.45 ಲಕ್ಷ ಮೆ.ಟನ್ ಸರಬರಾಜು ಬಾಕಿ ಇರುತ್ತದೆ. ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ ಸರಬರಾಜು ಮಾಡಿರುವ ರಸಗೊಬ್ಬರವನ್ನು ಸಮರ್ಪಕವಾಗಿ ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಿ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಭಾಯಿಸಲಾಗಿದೆ ಎಂದು ವಿವರಿಸಲಾಗಿದೆ.

ಆರು ಬಾರಿ ಕೇಂದ್ರಕ್ಕೆ ಮನವಿ: ಕೇಂದ್ರ ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಇಲಾಖೆ ವತಿಯಿಂದ ಏಪ್ರಿಲ್ ತಿಂಗಳಿಂದ ಇಲ್ಲಿಯ ವರೆಗೆ ಆರು ಬಾರಿ ಪತ್ರಗಳನ್ನು ಬರೆದು ಹಂಚಿಕೆಗೆ ಅನುಗುಣವಾಗಿ ಅವಶ್ಯವಿರುವ ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಲಾಗಿದೆ ಎಂದು ವಿವರಿಸಿದೆ.

ರಾಜ್ಯದ ಕೃಷಿ ಸಚಿವರು ಕೇಂದ್ರ ಸರ್ಕಾರದ ರಸಗೊಬ್ಬರ ಖಾತೆ ಸಚಿವರಿಗೆ ಅಗತ್ಯವಿರುವ ಡಿಎಪಿ ರಸಗೊಬ್ಬರದ ಪೂರೈಕೆಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಕೃಷಿ ಸಚಿವರೇ ಖುದ್ದಾಗಿ, ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನು ಕಳೆದ ಜು. 7 ರಂದು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಿದ್ದಾರೆ ಆದಾಗ್ಯೂ ಅಗತ್ಯ ಗೊಬ್ಬರ ಬಂದಿಲ್ಲ ಎಂದಿದೆ.

ರಾಜ್ಯದಲ್ಲಿ ಡಿಎಪಿ ಮತ್ತು ಯೂರಿಯಾ ರಸಗೊಬ್ಬರದ ಕಡಿಮೆ ಪೂರೈಕೆಯನ್ನು ಮನಗಂಡು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ರಸಗೊಬ್ಬರ ಖಾತೆ ಸಚಿವರಿಗೆ, ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೆ ಜು. 17 ಮತ್ತು 25 ರಂದು ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದಿಂದ ಹಂಚಿಕೆಗನುಗುಣವಾಗಿ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡದಿರುವುದರಿಂದ ರಾಜ್ಯದಲ್ಲಿ ಅಲ್ಲಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಕಂಡು ಬಂದಿದೆ ಎಂದು ಕೃಷಿ ಇಲಾಖೆಯು ತನ್ನ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ರಸಗೊಬ್ಬರ ಕೊರತೆಗೆ ಕೇಂದ್ರವೇ ನೇರಹೊಣೆ ಎಂದು ಹೇಳಿದೆ.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಮುಂಚಿತವಾಗಿ ಉತ್ತಮ ಮಳೆಯಾಗಿದ್ದು, ಸಾಮಾನ್ಯ ಅವಧಿಗಿಂತ ಮುಂಚೆ ಬಿತ್ತನೆ ಪ್ರಾರಂಭವಾಗಿದೆ. ಇಲ್ಲಿಯ ವರೆಗೆ ಬಿತ್ತನೆ ವಿಸ್ತೀರ್ಣ ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಹೆಚ್ಚಾಗಿದೆ. ಹೆಚ್ಚು ರಸಗೊಬ್ಬರ ಅವಶ್ಯವಿರುವ ಮುಸುಕಿನ ಜೋಳದ ವಿಸ್ತೀರ್ಣವು ಅಂದಾಜು 2 ಲಕ್ಷ ಹೆಕ್ಟೇರ್ ಗಣನೀಯವಾಗಿ ಹೆಚ್ಚಳವಾಗಿದೆ. ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಅಂದಾಜು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮರುಬಿತ್ತನೆಯಾಗಿದೆ. ತುಂಗಭದ್ರಾ, ಕೃಷ್ಣಾ, ಕಾವೇರಿ ಇತ್ಯಾದಿ ಪ್ರಮುಖ ಜಲಾಶಯಗಳಿಂದ ಅವಧಿಗಿಂತ ಮುಂಚಿತವಾಗಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಬಿಟ್ಟಿರುವುದರಿಂದ ಮುಂಚಿತವಾಗಿ ನಾಟಿ ಕೈಗೊಳ್ಳಲಾಗಿರುವುದು ಯೂರಿಯಾ ಮತ್ತು ರಸಗೊಬ್ಬರ ಬೇಡಿಕೆ ಪ್ರಮುಖ ಕಾರಣವಾಗಿದೆ ಎಂದು ಕೃಷಿ ಇಲಾಖೆಯು ವಿಶ್ಲೇಷಣೆ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ