ಕನ್ನಡಪ್ರಭ ವಾರ್ತೆ ವಿಜಯಪುರ: ಸ್ವಚ್ಛತೆ ಎಂಬುದು ನಾಗರಿಕ ಜೀವನದ ಮೊದಲ ಆದ್ಯತೆಯಾಗಿರಬೇಕು. ನಾವು ವಾಸಿಸುವ ಸ್ಥಳವನ್ನು ಶುಚಿಯಾಗಿ ಇಟ್ಟುಕೊಂಡರೆ ಮಹಾತ್ಮ ಗಾಂಧೀಜಿಯವರ ಆಶಯ ಸ್ವಚ್ಚ ಭಾರತದ ಪರಿಕಲ್ಪನೆ ಸಾಕಾರವಾಗುತ್ತದೆ. ಹಾಗಾಗಿ ಇನ್ನು ಮುಂದೆ ಪ್ರತಿ ತಿಂಗಳ ಮೊದಲನೇ ಶನಿವಾರವನ್ನು ಸ್ವಚ್ಛ ಶನಿವಾರ ಎನ್ನುವ ಪರಿಕಲ್ಪನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಶಿ ಆನಂದ ಹೇಳಿದರು.
ಸ್ವಚ್ಛತಾ ಕಾರ್ಯಕ್ಕೆ ಕಚೇರಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿ ತಿಂಗಳು ಮೊದಲನೇ ಶನಿವಾರ ಸಮಯಕ್ಕೆ ಸರಿಯಾಗಿ ಹಾಜರಿದ್ದು, ಕಾರ್ಯಾಲಯದ ಸೊಬಗನ್ನು ಹೆಚ್ಚಿಸಲು ನಾವೆಲ್ಲ ಕಾರ್ಯಪ್ರವೃತ್ತರಾಗೋಣ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಹಾಗೂ ಸಂರಕ್ಷಣೆ ಮಾಡಿದರೆ ಮಾತ್ರ ಆರೋಗ್ಯವಾಗಿರಲಿ ಸಾಧ್ಯ. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ಕಚೇರಿಯನ್ನು ಸ್ವಚ್ಛಗೊಳಿಸಿ ಸುಂದರ ವಾತಾವರಣವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ವೇಳೆ ಹಾಜರಿದ್ದರು.