ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿನಿ ರಾಜ್ ತಾಲೂಕಿನ ಗುಡುಗನಹಳ್ಳಿಗೆ ಭೇಟಿ ನೀಡಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದ ವೃದ್ಧೆಗೆ ನ್ಯಾಯಕೊಡಿಸುವಲ್ಲಿ ಯಶಸ್ವಿಯಾದರು.ಗ್ರಾಮದ 63 ವರ್ಷದ ವೃದ್ಧೆ ಸುವರ್ಣ ಕೊಂ ಪುಟ್ಟೇಗೌಡರಿಗೆ ಅವರ ಪತಿ ಅಣ್ಣ ನಾಗರಾಜ ಅವರಿಂದ ಬಹಳಷ್ಟು ದೌರ್ಜನ್ಯವಾಗುತ್ತಿತ್ತು. ಪತಿ ಪುಟ್ಟೇಗೌಡರ ನಿಧನದ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಬಂದ ಅವರ ಮನೆಯ ವ್ಯಾಪ್ತಿಯಲ್ಲಿ ಸ್ನಾನದ ಗೃಹವನ್ನು ಕಟ್ಟಿಕೊಳ್ಳಲು ಹೋದರೆ ಸುವರ್ಣ ಅವರ ಪತಿ ಅಣ್ಣ ಮತ್ತು ಆತನ ಕುಟುಂಬಸ್ಥರು ತುಂಬಾ ತೊಂದರೆ ನೀಡಿ ಸ್ನಾನಗೃಹ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದರು.
ಈ ಸಂಬಂಧ ನೊಂದ ಮಹಿಳೆ ಸುವರ್ಣ ಹಲವು ಬಾರಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ತಮ್ಮ ಭಾವನ ಮೇಲೆ ದೂರು ನೀಡಿದ್ದರೂ ಇವರಿಗೆ ನ್ಯಾಯ ಸಿಕ್ಕಿರಲಿಲ್ಲ. ಇವರ ಭಾಗಕ್ಕೆ ಬಂದಿರುವ ಮರಗಳನ್ನೆಲ್ಲ ಕಟ್ ಮಾಡಿ ತೊಂದರೆ ಕೊಡುತ್ತಿದ್ದರು. ಇದನ್ನು ಪ್ರಶ್ನಿಸಿದಾಗ ಹಲವು ಬಾರಿ ದೈಹಿಕ ಹಲ್ಲೆ ಮಾಡಿ ಗಾಯಗೊಳಿಸಿದ್ದರು.ಕೌಟುಂಬಿಕ ದೌರ್ಜನ್ಯದಿಂದ ನೊಂದ ವೃದ್ಧೆ ನ್ಯಾಯಕ್ಕಾಗಿ ಮಂಡ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಕಚೇರಿಗೆ ಬಂದು ದೂರನ್ನು ದಾಖಲಿಸಿದ್ದರು.
ವೃದ್ಧೆಯ ದೂರಿನ ಮೇರೆಗೆ ಗುಡುಗನಹಳ್ಳಿಗೆ ಆಗಮಿಸಿದ ರಜನಿರಾಜ್ ಸ್ಥಳೀಯರಿಂದ ಮಾಹಿತಿ ಪಡೆದು ದೌರ್ಜನ್ಯ ನಡೆಸುತ್ತಿದ್ದ ನಾಗರಾಜು ಅವರೊಂದಿಗೆ ಸಂವಹನ ನಡೆಸಿ ಕಾನೂನಿನ ತಿಳಿವಳಿಕೆ ನೀಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದರು.ಸಂಬಂಧಪಟ್ಟ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆ ಮಾಡಿ ದೌರ್ಜನ್ಯ ಪ್ರಕರಣ ಮರುಕಳಿಸಿದರೆ ಸೂಕ್ತ ಕ್ರಮ ತೆಗೆದುಕೊಂಡು ತೊಂದರೆ ಕೊಡುತ್ತಿರವ ವ್ಯಕ್ತಿಯನ್ನು ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಿ ನ್ಯಾಯ ಕೊಡಿಸಲು ಸೂಚಿಸಿದರು.
ಪಿಡಿಒ ಶಿವಕುಮಾರ್ ಅವರನ್ನು ಕರೆಯಿಸಿ ನೊಂದ ಮಹಿಳೆಯ ಭೂಮಿಯನ್ನು ಅಳತೆ ಮಾಡಿಸಿ ಸ್ನಾನದ ಗೃಹ ನಿರ್ಮಾಣ ಮಾಡಿಸಿಕೊಡಬೇಕೆಂದು ಸೂಚಿಸಿದರು. ಜೊತೆಗೆ ಬಸವ ವಸತಿ ಯೋಜನೆ ಮೂಲಕ ವೃದ್ಧೆಗೆ ಈಗಾಗಲೇ ಮಂಜೂರಾಗಿರುವ ಮನೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು.ನಂತರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರಜನಿ ರಾಜ್ ಸುವರ್ಣ ಅವರ ಪಾಲಿಗೆ ಬಂದಿರುವ ಭೂ ವಿವಾದದ ಬಗ್ಗೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿ ನೊಂದ ಮಹಿಳೆಗೆ ಅಗತ್ಯ ರಕ್ಷಣೆ ನೀಡುವಂತೆ ಸೂಚಿಸಿದರು.
ಈ ವೇಳೆ ಪಿಡಿಒ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕಿ ಪದ್ಮ ಸೇರಿದಂತೆ ಹಲವರು ಇದ್ದರು.