ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದಕಣ್ವ ಮಹರ್ಷಿಗಳ ನಾಡು ಎಂದೇ ಖ್ಯಾತಿಯಾದ ತಾಲೂಕಿನ ಕೊಣ್ಣೂರು ಗ್ರಾಮ ಜನಪದ ಕಲೆಗಳ ತವರೂರು. ಕೊಣ್ಣೂರಿನ ಚರಮೂರ್ತೇಶ್ವರ ಮಠದ 5ನೇ ಪೀಠಾಧಿಪತಿಯಾಗಿ ಶಿವಾನಂದ ದೇವರು ಮೇ 9ರಂದು ಪಟ್ಟಾಧಿಕಾರ ಹೊಂದಲಿದ್ದು, ಇದರ ಅಂಗವಾಗಿ ಗ್ರಾಮ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಚರಮೂರ್ತೇಶ್ವರ ಮಠವೆಂದೇ ಪ್ರಸಿದ್ಧಿ ಪಡೆದ ವಿರಕ್ತಮಠದ ಐದನೇ ಪೀಠಾಧಿಪತಿ ಆಗಲಿರುವ ಕೂಡಲಸಂಗಮ ಸಮೀಪದ ಮ್ಯಾಗೇರಿಯ ಶಿವಾನಂದೇವರ ಪಟ್ಟಾಧಿಕಾರ ಮಹೋತ್ಸವ ಪಂಚಪೀಠಾಧೀಶ್ವರರ ಹಾಗೂ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ.ಚರಮೂರ್ತೇಶ್ವರ ವಿರಕ್ತಮಠ ಹಲವಾರು ಶತಮಾನಗಳ ಇತಿಹಾಸ ಹೊಂದಿದೆ. ಆರಂಭದ ಪೀಠಾಧಿಪತಿಗಳಾಗಿ ಚರಮೂರ್ತೇಶ್ವರರು ಅಧಿಕಾರ ವಹಿಸಿಕೊಂಡಿದ್ದರಿಂದ, ಅವರ ಸಮಾಜಮುಖಿ ಸೇವೆಗಳ ಪರಿಣಾಮ ಈ ಮಠಕ್ಕೆ ಚರಮೂರ್ತೇಶ್ವರ ಮಠವೆಂದೇ ಜನರಿಂದ ಕರೆಯಲ್ಪಟ್ಟಿತು. ಎರಡನೇ ಪೀಠಾಧಿಪತಿ ಬಸಯ್ಯ ಶಿವಯೋಗಿಗಳು, ಮೂರನೇ ಪೀಠಾಧಿಪತಿಗಳಾಗಿ ಚನ್ನವೀರೇಶ್ವರ ಶಿವಾಚಾರ್ಯರು ಶ್ರೀಮಠದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದರು.ನಾಲ್ಕನೇ ಪೀಠಾಧಿಪತಿಗಳಾಗಿ ಶಿವಕುಮಾರ ಶಿವಾಚಾರ್ಯರು ವೈದಿಕ, ಜ್ಯೋತಿಷ್ಯ ಪಂಡಿತರಾಗಿ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದರು. ಎರಡು ದಶಕಗಳಿಂದ ಕೊಣ್ಣೂರ, ಕೆರೂರ ಭಾಗದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಈಗ ಅವರಿಗೆ 60 ವರ್ಷ ಆಗಿದ್ದರಿಂದ ಜೊತೆಗೆ ಕೆರೂರ ವಿರಕ್ತಮಠದ ಜವಾಬ್ದಾರಿ ಪರಿಣಾಮ ಕೊಣ್ಣೂರಿನ ತಮ್ಮ ವಿರಕ್ತಮಠದ ಪೀಠಾಧಿಪತಿ ಸ್ಥಾನಕ್ಕೆ ಶಿವಾನಂದ ದೇವರನ್ನು ಐದನೇ ಪೀಠಾಧಿಪತಿಗಳಾಗಿ ನೇಮಕಗೊಳಿಸಿದ್ದು ಅವರ ಪಟ್ಟಾಧಿಕಾರ ಶುಕ್ರವಾರ ನಡೆಯಲಿದೆ.
ಮ್ಯಾಗೇರಿಯ ಮಹಾಂತಯ್ಯ ಹಿರೇಮಠ ಮತ್ತು ದ್ರಾಕ್ಷಾಯಿಣಿಯವರ ಪುತ್ರರಾದ ಶಿವಾನಂದ ದೇವರು, ಸಂಸ್ಕೃತದಲ್ಲಿ ಬಂಗಾರದ ಪದಕದೊಂದಿಗೆ ಸ್ನಾತಕೊತ್ತರ ಪದವಿ, ಬೆಂಗಳೂರು ವಿವಿಯಿಂದ "ಶ್ರೀಕರ ಭಾಷ್ಯದ ಒಂದು ಸಮನ್ವಯ ಅಧ್ಯಯನ ” ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸಮಾಜ ಮುಖಿಯಾಗಿ ಸೇವೆ ಮಾಡಲು ವೈದಿಕ, ಜ್ಯೋತಿಷ್ಯ, ಸಂಗೀತ ವಿಷಯಗಳಲ್ಲಿಯೂ ಪ್ರವೀಣರಾಗಿದ್ದಾರೆ.ಸಂಸಾರದಲ್ಲಿ ವ್ಯಾಮೋಹವಿರದ ಇವರಿಗೆ ಕೊಣ್ಣೂರು ಚರಮೂರ್ತೇಶ್ವರ ಮಠದ ಶಿವಕುಮಾರ ಶಿವಾಚಾರ್ಯರ ಗುರು ಕಾರುಣ್ಯ ಲಭಿಸಿದೆ. ಆ ಕಾರುಣ್ಯವೇ ಚರಮೂತೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಚರಪಟ್ಟಾಧಿಕಾರ ಮಹೋತ್ಸವ ಮೇ 9ರಂದು ನಡೆಯಲಿದೆ. ಇದರ ಸಾನಿಧ್ಯವನ್ನು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು, ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ಅನುಗ್ರಹ ಮತ್ತು ಸಮಾಜ ಸೇವಾ ದೀಕ್ಷೆಯನ್ನು ಬಸವಜಯಚಂದ್ರ ಶ್ರೀ ನೀಡುವರು.ಪಟ್ಟಾಧಿಕಾರ ಹೊಂದಿದ ಶ್ರೀಗಳ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೈಭವದೊಂದಿಗೆ ಮತ್ತು ಮಹಿಳೆಯರ ಕುಂಭ ಮೇಳದೊಂದಿಗೆ ನೆರವೇರುವುದು.ಈ ಸಂದರ್ಭದಲ್ಲಿ ಉಪದೇಶಾಮೃತವನ್ನು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಮಾಡುವರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ್, ಶಾಸಕ ಸಿ.ಸಿ.ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಬಿ.ಆರ್. ಯಾವಗಲ್ ಸೇರಿದಂತೆ ಮುಂತಾದವರು ಭಾಗವಹಿಸುವರು.