ಹುಕ್ಕೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ
25 ವರ್ಷಗಳ ಹಿಂದೆ ಕೃಷ್ಣ ನಾರಾಯಣ ಮರಾಠಿಯವರ ಶೈಕ್ಷಣಿಕ ಆಸಕ್ತಿ, ಸ್ಥಳದಾನಿ ದಾಕೂ ಲಕ್ಕು ಮರಾಠಿಯವರ ದಾನದ ಫಲವಾಗಿ ಇಂದು ಶಾಲೆ ರಜತಮಹೋತ್ಸವ ಆಚರಿಸಲು ಸಾಧ್ಯವಾಗಿದೆ. ನಾವು ನೀಡಿದ ದಾನ, ಧರ್ಮ ಚಿರಸ್ಮರಣೀಯವಾಗಿರುತ್ತದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಉಪ್ಪೋಣಿ ಗ್ರಾಪಂ ವ್ಯಾಪ್ತಿಯ ಹುಕ್ಕೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯದ್ವಾರ, ಕಲಿಕೋಪಕರಣ ಕೊಠಡಿ ಉದ್ಘಾಟಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಾಲೆಗಾಗಿ ಸೇವೆ ಸಲ್ಲಿಸಿದವರ, ಶಿಕ್ಷಕರ ಸನ್ಮಾನಿಸುವುದು ಮುಖ್ಯ. ಇವರೆಲ್ಲರ ಸಹಕಾರದಿಂದ ಶಾಲೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಎನ್ನುವುದು ಬಹಳ ಮುಖ್ಯ, ಶಿಕ್ಷಣ ಸಿಕ್ಕಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಶಾಲೆಗಳಿಗೆ ನೀಡುವ ಕೊಡುಗೆ ದೇವಸ್ಥಾನಕ್ಕೆ ನೀಡಿದಂತೆ. ಊರಿನ ಶಾಲೆ, ದೇವಸ್ಥಾನ ಅಭಿವೃದ್ದಿ ಹೊಂದಿದರೆ ಆ ಊರು ಅಭಿವೃದ್ದಿ ಹೊಂದಿದಂತೆ. ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಇದೇ ವೇಳೆ ಸಚಿವರು ಜ್ಞಾನಸಿರಿ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು.ಸಚಿವ ಮಂಕಾಳ ವೈದ್ಯರನ್ನು, ಶಾಲೆ ಸ್ಥಾಪನೆಗೆ ಸಹಕರಿಸಿದ ಆರ್.ಎಸ್. ರಾಯ್ಕರ್, ಭೂದಾನಿ ದಾಕೂ ಲಕ್ಕು ಮರಾಠಿಯವರನ್ನು ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಗ್ರಾಪಂ ಅಧ್ಯಕ್ಷ ಗಣೇಶ ನಾಯ್ಕ, ಅಡುಗೆ ಸಹಾಯಕರನ್ನು ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿದರು.ಉಪ್ಪೋಣಿ ಗ್ರಾಪಂ ಅಧ್ಯಕ್ಷ ಗಣೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯರಾದ ವಿನೋದ ನಾಯ್ಕ, ಯೋಗೇಶ ರಾಯ್ಕರ್, ಮಂಜುನಾಥ ಗೌಡ, ಗೀತಾ ನಾಯ್ಕ, ತಾಪಂ ಆಡಳಿತಾಧಿಕಾರಿ ಎನ್.ಆರ್. ಹೆಗಡೆ, ಬಿಇಒ ವಿನಾಯಕ ಅವಧಾನಿ, ಶಿಕ್ಷಣ ಸಂಯೋಜಕ ಪ್ರಮೋದ್ ನಾಯ್ಕ,ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಮರಾಠಿ,ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಮೇಶ ಮರಾಠಿ, ಮಾಜಿ ಜಿಪಂ ಸದಸ್ಯ ಪಿಟಿ ನಾಯ್ಕ, ಗೋವಿಂದ ನಾಯ್ಕ, ಗುತ್ತಿಗೆದಾರರಾದ ಸಂತೋಷ ನಾಯ್ಕ, ಪ್ರಶಾಂತ ನಾಯ್ಕ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಜಯಶ್ರೀ ನಾಯ್ಕ, ವಿ.ಜಿ. ನಾಯ್ಕ, ಎಸ್.ಎಮ್. ಭಟ್ ಮತ್ತಿತರಿದ್ದರು. ಶಾಲಾ ಮುಖ್ಯಾಧ್ಯಾಪಕ ರಮಾನಂದ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುಧೀಶ್ ನಾಯ್ಕ, ದೀಕ್ಷಾ ನಾಯ್ಕ ನಿರೂಪಿಸಿದರು. ಸುಬ್ರಾಯ ಶಾನಬಾಗ್ ವಂದಿಸಿದರು.