ಕನ್ನಡಪ್ರಭವಾರ್ತೆ ತಿಪಟೂರು
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಂಭೀರ ಅಪರಾಧವಾಗಿದ್ದು, ಅದನ್ನು ತಡೆಗಟ್ಟಲು ಪೋಕ್ಸೋ ಕಾಯ್ದೆಯನ್ನು ೨೦೧೨ರಲ್ಲಿ ಜಾರಿಗೆ ತರಲಾಯಿತು, ಪ್ರತಿ ಮಗುವಿನ ಬಾಲ್ಯದ ಸುರಕ್ಷತೆ ಸಮಾಜದ ಜವಾಬ್ದಾರಿಯಾಗಿದ್ದು ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕೆಂದರು.
ತಿಪಟೂರು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವರದರಾಜ್ ಬಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಪೋಕ್ಸೋ ಕಾಯ್ದೆಯಡಿ ಅಪರಾಧ ಸಾಬೀತಾದರೆ ಜೀವಿತಾವಧಿವರೆಗೂ ಶಿಕ್ಷೆ ಆಗುತ್ತದೆ. ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶ ಹಾಗೂ ವರ್ತನೆ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳಿಗೆ ಮೊಬೈಲ್ ಅಗತ್ಯವಾಗಿದ್ದು ಸದರಿ ಡಿಜಿಟಲ್ ಮಾಧ್ಯಮವನ್ನು ಬಹಳ ಎಚ್ಚರಿಕೆಯಿಂದ ಒಳ್ಳೆಯದಕ್ಕೆ ಮಾತ್ರ ಬಳಸಲು ಸೂಚಿಸಿದರು.ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿದ್ಯಾರ್ಥಿಗಳು ಹದಿಹರೆಯದ ಹಂತದಲ್ಲಿ ವಿವಿಧ ರೀತಿಯ ಆಕರ್ಷಣೆಗೆ ಲೈಂಗಿಕ ಕಿರುಕುಳದಂತಹ ದೌರ್ಜನ್ಯಕ್ಕೆ ಒಳಗಾಗದೆ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ರೀತಿಯ ಅವಘಡಗಳಾದಾಗ ಮಕ್ಕಳ ಸಹಾಯವಾಣಿ ೧೦೯೮ಗೆ ಪೋನ್ ಮಾಡಿ ಮಾಹಿತಿ ನೀಡಬೇಕೆಂದು ತಿಳಿಸಿದರು. ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನಯ್ಯ, ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಆಗುವ ಮೋಸ, ವಂಚನೆ ಬಗ್ಗೆ ಜಾಗೃತಿ ವಹಿಸಬೇಕೆಂದರು.