ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲು ಸಂತೆ ಚಟುವಟಿಕೆ ಉಪಕಾರಿ

KannadaprabhaNewsNetwork |  
Published : Oct 01, 2026, 01:15 AM IST
63 | Kannada Prabha

ಸಾರಾಂಶ

ಶಾಲೆಯ ವಿದ್ಯಾರ್ಥಿಗಳೇ ವ್ಯಾಪಾರಿಗಳಾಗಿ ವಿವಿಧ ಬಗೆಯ ತರಕಾರಿ, ಹಣ್ಣು, ಸೊಪ್ಪು, ತಿಂಡಿ-ತಿನಿಸು ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿದರು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ಹಣದ ನಿರ್ವಹಣೆ ಹಾಗೂ ವ್ಯವಹಾರ ಕೌಶಲ ಬೆಳೆಸುವ ಉದ್ದೇಶದಿಂದ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಶಾಲೆಯ ವತಿಯಿಂದ ಆಯೋಜಿಸಿದ್ದ ‘ಮಕ್ಕಳ ಸಂತೆ’ ಗಮನ ಸೆಳೆಯಿತು.ಶಾಲೆಯ ವಿದ್ಯಾರ್ಥಿಗಳೇ ವ್ಯಾಪಾರಿಗಳಾಗಿ ವಿವಿಧ ಬಗೆಯ ತರಕಾರಿ, ಹಣ್ಣು, ಸೊಪ್ಪು, ತಿಂಡಿ-ತಿನಿಸು ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿದರು. ಸಂತೆ ವಾತಾವರಣವನ್ನು ಹೋಲುವಂತೆ ಮಳಿಗೆಗಳನ್ನು ಸಿದ್ಧಪಡಿಸಿಕೊಂಡಿದ್ದ ಮಕ್ಕಳು, ತಮ್ಮ ಉತ್ಪನ್ನಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಗ್ರಾಹಕರನ್ನು ಆಕರ್ಷಿಸುವ ರೀತಿಯಲ್ಲಿ ಮಾರಾಟ ಮಾಡಿದರು.ಮಕ್ಕಳ ಸಂತೆಯನ್ನು ಆದಿಚುಂಚನಗಿರಿ ಶಾಲೆಯ ಮುಖ್ಯ ಶಿಕ್ಷಕಿ ನಂದಿನಿ ಅವರು ಉದ್ಘಾಟಿಸಿದರು. ಬಳಿಕ ಮಕ್ಕಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳು ಮಾರಾಟ ಮಾಡುತ್ತಿದ್ದ ತರಕಾರಿ ಹಾಗೂ ಇತರ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.ಸಂತೆ ಆರಂಭವಾಗುತ್ತಿದ್ದಂತೆ ಮಕ್ಕಳ ಮಳಿಗೆಗಳಿಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ತಮ್ಮ ಮಕ್ಕಳು ವ್ಯಾಪಾರ ಮಾಡುತ್ತಿರುವುದನ್ನು ಕಂಡು ಪೋಷಕರು ಸಂತಸಪಟ್ಟರು. ಮಕ್ಕಳು ಗ್ರಾಹಕರೊಂದಿಗೆ ಮಾತನಾಡಿ, ವಸ್ತುಗಳ ಬೆಲೆ ತಿಳಿಸಿ, ಹಣ ಪಡೆದು ಉಳಿದ ಹಣವನ್ನು ಹಿಂದಿರುಗಿಸುವ ಮೂಲಕ ವ್ಯವಹಾರದ ಪ್ರಾಯೋಗಿಕ ಅನುಭವ ಪಡೆದರು.ತರಕಾರಿ ವಿಭಾಗದಲ್ಲಿ ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಬೀನ್ಸ್ ಸೇರಿದಂತೆ ವಿವಿಧ ತರಕಾರಿಗಳು, ವಿವಿಧ ಬಗೆಯ ಸೊಪ್ಪು ಹಾಗೂ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಇದರ ಜೊತೆಗೆ ವಿದ್ಯಾರ್ಥಿಗಳು ಸ್ವತಃ ಸಿದ್ಧಪಡಿಸಿದ್ದ ಅಥವಾ ಶಾಲಾ ಚಟುವಟಿಕೆಯ ಭಾಗವಾಗಿ ತಂದಿದ್ದ ವಿವಿಧ ಬಗೆಯ ತಿಂಡಿ-ತಿನಿಸುಗಳ ಮಳಿಗೆಗಳೂ ಗಮನ ಸೆಳೆದವು.ತಮ್ಮ ಮಕ್ಕಳೇ ಮಾರಾಟ ಮಾಡುತ್ತಿದ್ದ ತರಕಾರಿ ಮತ್ತು ತಿನಿಸುಗಳನ್ನು ಖರೀದಿಸಲು ಪೋಷಕರು ಮುಗಿಬಿದ್ದರು. ಕೆಲವರು ಮಕ್ಕಳಿಂದ ವಸ್ತುಗಳನ್ನು ಖರೀದಿಸುವುದರ ಜೊತೆಗೆ ಅವರ ವ್ಯಾಪಾರ ಮಾಡುವ ರೀತಿಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲಾ ಪಠ್ಯದ ಜತೆಗೆ ಇಂತಹ ಪ್ರಾಯೋಗಿಕ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಮಕ್ಕಳು ಕಲಿಕೆಯನ್ನು ನೈಜ ಬದುಕಿನೊಂದಿಗೆ ಸಂಪರ್ಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಪೋಷಕರಿಂದ ವ್ಯಕ್ತವಾಯಿತು. ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಪೋಷಕರ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ
ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ