- ವಿರೋಧ ನಡೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು: ಮೊಹಮ್ಮದ್
- - -ದಾವಣಗೆರೆ: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಅಭಿನಂದನಾರ್ಹ. ಜಾತಿ, ಧರ್ಮದ ಸಂಕೋಲೆ ಮೀರಿ ವಿಶ್ವಕ್ಕೆ ಕನ್ನಡ ನಾಡಿನ ಸಾಂಸ್ಕೃತಿಕ, ಪರಂಪರೆ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಿದ ಲೇಖಕಿ ಅವರಿಂದ ದಸರಾ ಚಾಲನೆಗೊಳ್ಳುತ್ತಿರುವುದು ಅರ್ಥಪೂರ್ಣ ಎಂದು ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಅಭಿಪ್ರಾಯಪಟ್ಟಿದ್ದಾರೆ.
ದಸರಾ ಉದ್ಘಾಟನೆಗೆ ಬಾನು ಅವರ ಆಯ್ಕೆಯನ್ನು ಅವರ ಜಾತಿ- ಧರ್ಮದ ಕಾರಣದಿಂದ ಕೆಲವರು ವಿರೋಧಿಸುತ್ತಿರುವುದು ನಾಗರೀಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಶಾಂತಿ ಉಂಟು ಮಾಡುವ ಮನಸ್ಸುಗಳು ಮೊದಲು ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದಿದ್ದಾರೆ.ಬಾನು ಮುಷ್ತಾಕ್ ಉದ್ಘಾಟನೆ ಮಾಡುತ್ತಿರುವುದು ನಾಡಹಬ್ಬ ದಸರಾ ಉತ್ಸವ ವಿನಾ ನವರಾತ್ರಿ ಉತ್ಸವವನ್ನಲ್ಲ. ಅದಕ್ಕಾಗಿಯೇ ಅವರ ಆಯ್ಕೆಯನ್ನು ಯದುವಂಶದ ಮಹಾರಾಜರು ಕೂಡ ಸ್ವಾಗತಿಸಿದ್ದಾರೆ. ಮೈಸೂರು ದಸರಾ ಹಬ್ಬವನ್ನು ನಾಡಹಬ್ಬವೆಂದು ಗುರುತಿಸಿದ ಮೇಲೆ ಅದೂ ಕೇವಲ ಒಂದು ಜನಾಂಗಕ್ಕೆ, ಒಂದು ಜಾತಿ ಧರ್ಮಕ್ಕೆ ಮಾತ್ರ ಸೀಮಿತವಲ್ಲ, ನಾಡಿನಲ್ಲಿರುವ ಪ್ರತಿಯೊಬ್ಬರ, ಎಲ್ಲ ಜನಾಂಗದವರ ಹಬ್ಬ ಎಂದು ತಿಳಿಸಿದ್ದಾರೆ.
ಈ ಹಿಂದೆ ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹ್ಮದ್ ಅವರು ಕೂಡ ದಸರಾ ಉದ್ಘಾಟಿಸಿದ್ದರು. ತನ್ವಿರ್ ಸೇಠ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಚಾಮುಂಡೇಶ್ವರಿ ಗರ್ಭ ಗುಡಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಮೈಸೂರಿನಲ್ಲಿರುವ ಅನೇಕ ಮಸೀದಿಗಳನ್ನು ನಿರ್ಮಿಸಿರುವುದು ಮೈಸೂರು ಮಹಾರಾಜರೇ. ಹಾಗಾಗಿ, ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ವಿರೋಧ ಸರಿಯಲ್ಲ ಎಂದಿದ್ದಾರೆ.- - -
-29ಕೆಡಿವಿಜಿ33: ಮೊಹಮ್ಮದ್ ಜಿಕ್ರಿಯಾ