ರಾಜಧಾನಿಯಲ್ಲಿ ವಾಡಿಕೆಗಿಂತ ಶೇ.113ರಷ್ಟು ಹೆಚ್ಚಿನ ಪೂರ್ವ ಮುಂಗಾರು ಮಳೆ

KannadaprabhaNewsNetwork | Updated : Apr 21 2025, 06:47 AM IST

ಸಾರಾಂಶ

ರಾಜಧಾನಿಯಲ್ಲಿ ಭಾನುವಾರವೂ ಮಳೆ ಮುಂದುವರೆದಿದ್ದು, ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.113ರಷ್ಟು ಹೆಚ್ಚಿನ ಮಳೆಯಾಗಿದೆ.

 ಬೆಂಗಳೂರು : ರಾಜಧಾನಿಯಲ್ಲಿ ಭಾನುವಾರವೂ ಮಳೆ ಮುಂದುವರೆದಿದ್ದು, ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.113ರಷ್ಟು ಹೆಚ್ಚಿನ ಮಳೆಯಾಗಿದೆ.

ಕಳೆದ ಎರಡು ವಾರದಿಂದ ನಗರದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಇದ್ದು, ನಿರಂತವಾಗಿ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಹಾಗೂ ಬಿಸಿಲಿನ ಕಣ್ಣಾಮುಚ್ಚಾಲೆ ಕಂಡು ಬಂತು. ಆದರೆ, ಮಧ್ಯಾಹ್ನದ ಬಳಿಕ ಪ್ರಮುಖ ಭಾಗದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಆರಂಭಗೊಂಡಿತ್ತು. ದೊಡ್ಡ ಪ್ರಮಾಣ ಮಳೆ ಬರುವ ನಿರೀಕ್ಷೆ ಕಂಡುಬಂತಾದರೂ, ವ್ಯಾಪಕಗಾಗಿ ಮಳೆ ಬರಲಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣ ಮಳೆ ಸುರಿದಿದೆ.

ರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್‌, ಆರ್‌.ಆರ್‌. ನಗರ, ಬಸವೇಶ್ವರ ನಗರ, ವಿ.ನಾಗೇನಹಳ್ಳಿ, ಹೊರಮಾವು, ಗುರುಡಾಚಾರ್‌ ಪಾಳ್ಯ, ಬಿಳೇಕಹಳ್ಳಿ, ರಾಮಮೂರ್ತಿನಗರ, ಕಾಡುಗುಡಿ, ಬಿಟಿಎಂ ಲೇಔಟ್, ಹೂಡಿ, ಬಸವನಪುರ, ಕೆ.ಆರ್.ಪುರ, ಚಾಮರಾಜಪೇಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ದೊಡ್ಡನೆಕ್ಕುಂಡಿ ಮೊದಲಾದ ಕಡೆ ಹಗುರ ಮಳೆಯಾಗಿದೆ. ನಗರದ ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ತುಸು ನೀರು ನಿಂತಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾಹನ ಸವಾರರು ಮಳೆಯಲ್ಲಿ ನೆನೆದುಕೊಂಡು ತೆರಳುತ್ತಿದ್ದರು. ಕೆಲ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.

ನಗರದಾದ್ಯಂತ ಮಳೆ ಬಿದ್ದರೂ ಹೆಚ್ಚಿನ ಪ್ರಮಾಣ ಮಳೆಯಾಗಿಲ್ಲ. ಜಕ್ಕೂರಿನಲ್ಲಿ 1.2 ಸೆಂ.ಮೀ ಅತ್ಯಧಿಕ ಮಳೆಯಾಗಿದೆ. ಚೌಡೇಶ್ವರಿ, ಹಂಪಿನಗರದಲ್ಲಿ ತಲಾ 1.1, ವಿದ್ಯಾರಣ್ಯಪುರ, ವನ್ನಾರ್‌ಪೇಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಭಾನುವಾರ ಸರಾಸರಿ 3.7 ಮಿ.ಮೀ ಮಳೆಯಾಗಿದ್ದು, ಸೋಮವಾರವೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

50 ದಿನದಲ್ಲಿ 61.2 ಸೆಂ.ಮೀ ಮಳೆ

ಮಾ.1 ರಿಂದ ಪೂರ್ವ ಮುಂಗಾರು ಅವಧಿ ಆರಂಭಗೊಂಡಿದ್ದು, ಏ.20ರವರೆಗೆ ವಾಡಿಕೆ ಪ್ರಕಾರ ನಗರದಲ್ಲಿ ಈ ಅವಧಿಯಲ್ಲಿ 28.8 ಸೆಂ.ಮೀ ನಷ್ಟು ಮಳೆಯಾಗಬೇಕು. ಆದರೆ, ನಗರದಲ್ಲಿ ಈ ಬಾರಿ 61.2 ಸೆಂ.ಮೀ ಮಳೆಯಾಗಿದೆ. ಈ ಮೂಲಕ ವಾಡಿಕೆ ಪ್ರಮಾಣಕ್ಕಿಂತ ಶೇ.113ರಷ್ಟು ಹೆಚ್ಚಿನ ಪ್ರಮಾಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share this article