ರಾಜ್ಯ ನಂ.೧ ಮಾಡಲು ಬಂಟರ ಸಹಕಾರ ಬೇಕು- ಗೃಹ ಸಚಿವ ಡಾ. ಪರಮೇಶ್ವರ್ರ್
ಕನ್ನಡಪ್ರಭ ವಾರ್ತೆ ಉಡುಪಿ ಇಂದು ಭಾರತದ ಬಗ್ಗೆ ಇಡೀ ವಿಶ್ವದ ದೃಷ್ಟಿಕೋನವೇ ಬದಲಾಗಿದೆ. ಭಾರತ ವಿಶ್ವದಲ್ಲಿಯೇ ಅತೀವೇಗದಲ್ಲಿ ಬೆಳೆಯುತ್ತಿರುವ 2ನೇ ಆರ್ಥಿಕ ಶಕ್ತಿಯಾಗಿದೆ. ಈ ಸಂದರ್ಭವನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆ ನೀಡಿದ್ದಾರೆ. ಭಾನುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಬಂಟರ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯವನ್ನು ಮತ್ತೇ ದೇಶದ ನಂ.1 ಸ್ಥಾನಕ್ಕೆ ತರಲು ಸರ್ಕಾರ ಪಣತೊಟ್ಟಿದೆ. ಸರ್ಕಾರವು ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ಮತ್ತು ಬಡವರನ್ನು ಮುಖ್ಯಮಾಹಿನಿಗೆ ತರುವ ಗುರಿಯನ್ನು ಹೊಂದಿದೆ. ಇದಕ್ಕೆ ಬಂಟ ಸಮುದಾಯದ ಸಹಕಾರ, ಕೊಡುಗೆ ಬೇಕು ಎಂದವರು ಹೇಳಿದರು. ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ಸಂದರ್ಭದಲ್ಲಿ ಬಂಟರ ಅಭಿವೃದ್ಧಿ ನಿಗಮ ಬೇಕು ಎಂದು ಯಾರೂ ಕೇಳಿರಲಿಲ್ಲ, ಆದರೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೂಚನೆಯಂತೆ ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಅದನ್ನೀಗ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಸೇರಿಸುವುದಾಗಿ ಘೋಷಿಸಿದ್ದಾರೆ. ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದವರು ಹೇಳಿದರು. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಕನ್ನಡ ಚಿತ್ರರಂಗದ ತಾರೆಯರಾದ ಗುರುಕಿರಣ್ ಮತ್ತು ರಿಷಬ್ ಶೆಟ್ಟಿ, ಬಂಟ ಸಮುದಾಯ ಪ್ರಮುಖ ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಮಿಥುನ್ ರೈ, ಬಂಜಾರ ಪ್ರಕಾಶ್ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಪ್ರವೀಣ್ ಶೆಟ್ಟಿ ವಕ್ವಾಡಿ, ರಾಜೇಶ್ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಎ.ಸದಾನಂದ ಶೆಟ್ಟಿ ಆಗಮಿಸಿದ್ದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ ವೇದಿಕೆಯಲ್ಲಿದ್ದರು. ಪ್ರದಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಬಂಟರಿಗೆ 2ಬಿ ಮೀಸಲಾತಿಗೆ ಮನವಿ ಇದೇ ಸಂದರ್ಭ ಡಾ.ಪರಮೇಶ್ವರ್ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಬಂಟ ಸಮುದಾಯವನ್ನು 3ಬಿ ಬದಲಾಗಿ 2ಬಿ ಮೀಸಲಾತಿಗೆ ಸೇರಿಸಬೇಕು ಮತ್ತು ಜಾತಿ ಪಟ್ಟಿಯಲ್ಲಿ ಬಂಟರು ಜೊತೆಗೆ ನಾಡವರು ಎಂಬುದನ್ನು ಸೇರಿಸಬೇಕು ಎಂದು ಮನವಿ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.