ಅಕ್ಟೋಬರ್ ಕಳೆದರೂ ಮಂಜೂರಾಗದ ಕಳೆದ ವರ್ಷದ ಬೆಳೆ ವಿಮೆ ಹಣ

KannadaprabhaNewsNetwork |  
Published : Oct 30, 2023, 12:30 AM IST

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಇನ್ಸೂರೆನ್ಸ್ ಜವಾಬ್ದಾರಿ ಹೊತ್ತಿದ್ದ ಎಚ್‌ಡಿಎಫ್‌ಸಿ ಈಗಾಗಲೇ ಅಡಕೆ ಬೆಳೆಗೆ ಪರಿಹಾರವನ್ನು ಪ್ರತಿ ಎಕರೆಗೆ ₹ ೧೫ರಿಂದ ₹ ೧೬ ಸಾವಿರ ರೈತರ ಖಾತೆಗೆ ಜಮೆ ಮಾಡಿದೆ.

ಮಂಜುನಾಥ ಸಾಯೀಮನೆ

ಶಿರಸಿ:

೨೦೨೨-೨೩ನೇ ಸಾಲಿನ ಬೆಳೆ ವಿಮೆಯ ಪರಿಹಾರ ಸೆ. ೩೦ರೊಳಗೆ ಜಮಾ ಆಗಬೇಕಿತ್ತು. ಆದರೆ, ನವೆಂಬರ್ ತಿಂಗಳು ಬಂದರೂ ರೈತರಿಗೆ ಪರಿಹಾರದ ಹಣ ಮಂಜೂರಾಗಲೇ ಇಲ್ಲ.

ಪಕ್ಕದ ಹಾವೇರಿ ಜಿಲ್ಲೆಯಲ್ಲಿ ಇನ್ಸೂರೆನ್ಸ್ ಜವಾಬ್ದಾರಿ ಹೊತ್ತಿದ್ದ ಎಚ್‌ಡಿಎಫ್‌ಸಿ ಈಗಾಗಲೇ ಅಡಕೆ ಬೆಳೆಗೆ ಪರಿಹಾರವನ್ನು ಪ್ರತಿ ಎಕರೆಗೆ ₹ ೧೫ರಿಂದ ₹ ೧೬ ಸಾವಿರ ರೈತರ ಖಾತೆಗೆ ಜಮೆ ಮಾಡಿದೆ.

ಶಿರಸಿ ತಾಲೂಕಿನ ಸಂಪಖಂಡ ಮತ್ತು ಹುಲೇಕಲ್ ಹೋಬಳಿಯಲ್ಲಿ ಬೆಳೆ ಹಾನಿ ಅಧಿಕ ಪ್ರಮಾಣದಲ್ಲಿ ಆಗಿತ್ತು. ಈ ಹೋಬಳಿಯಲ್ಲಿ ಪ್ರತಿ ಎಕರೆಗೆ ₹ ೧೯ ಸಾವಿರ ಪರಿಹಾರ ಜಮೆ ಆಗಬೇಕು ಎಂಬುದು ರೈತರ ಅಂದಾಜು. ಅದರಂತೆ ಬನವಾಸಿ ಭಾಗದಲ್ಲಿ ₹ ೧೪ ಸಾವಿರ, ಬದನಗೋಡ ಭಾಗಕ್ಕೆ ₹ ೧೬ ಸಾವಿರ ಎಕರೆಗೆ ಜಮಾ ಆಗಬೇಕಿತ್ತು. ಆದರೆ ಇದುವರೆಗೂ ಹಣ ಜಮಾ ಆಗದಿರುವುದು ರೈತರನ್ನು ಕಂಗಾಲಾಗಿಸಿದೆ.

₹ ೨೩೮ ಕೋಟಿಗೆ ಇನ್ಸೂರೆನ್ಸ್:ಉತ್ತರ ಕನ್ನಡ ಜಿಲ್ಲೆಯಲ್ಲಿ ೭೬,೭೩೩ ರೈತರು ಒಟ್ಟೂ ₹ ೧೧.೯೧ ಕೋಟಿ ಇನ್ಸೂರೆನ್ಸ್ ಪ್ರೀಮಿಯಂ ತುಂಬಿದ್ದಾರೆ. ಪ್ರಸಕ್ತ ಹಿಂದಿನ ವರ್ಷದ ಹವಾಮಾನ ಸ್ಥಿತಿ ಪರಿಗಣಿಸಿದರೆ ಜಿಲ್ಲೆಗೆ ₹ ೨೩೮.೮೩ ಕೋಟಿ ಪರಿಹಾರ ಬರಬೇಕಿದೆ. ಅಂಕೋಲಾ ತಾಲೂಕಿನಲ್ಲಿ ೨೦೨೮ ರೈತರಿಂದ ₹ ೫೯ ಲಕ್ಷ, ಭಟ್ಕಳ ತಾಲೂಕಿನಲ್ಲಿ ೧೧೧೨ ರೈತರಿಂದ ₹ ೨೧ ಲಕ್ಷ, ಹೊನ್ನಾವರ ತಾಲೂಕಿನಲ್ಲಿ ೭೧೨೦ ರೈತರಿಂದ ₹ ೬೬ ಲಕ್ಷ, ಜೋಯಿಡಾ ತಾಲೂಕಿನಲ್ಲಿ ೧೩೦೫ ರೈತರಿಂದ ₹ ೩೪ ಲಕ್ಷ ಪ್ರೀಮಿಯಂ ತುಂಬಿಸಿಕೊಳ್ಳಲಾಗಿತ್ತು. ಕುಮಟಾ ತಾಲೂಕಿನಲ್ಲಿ ೧೦೮೭ ರೈತರಿಂದ ₹ ೧೯ ಲಕ್ಷ, ಮುಂಡಗೋಡ ತಾಲೂಕಿನಲ್ಲಿ ೨೦೫೫ ರೈತರು ₹ ೧.೦೧ ಕೋಟಿ, ಸಿದ್ದಾಪುರ ತಾಲೂಕಿನಲ್ಲಿ ೨೬೭೨೮ ರೈತರಿಂದ ₹ ೨ ಕೋಟಿ ಪ್ರೀಮಿಯಂ, ಶಿರಸಿ ತಾಲೂಕಿನಲ್ಲಿ ೨೪೯೨೬ ರೈತರಿಂದ ₹ ೪.೮೦ ಕೋಟಿ, ಯಲ್ಲಾಪುರ ತಾಲೂಕಿನಲ್ಲಿ ೧೦೩೭೨ ರೈತರು ₹ ೨.೩ ಕೋಟಿ ಪ್ರೀಮಿಯಂ ತುಂಬಿದ್ದು, ಪರಿಹಾರಕ್ಕೆ ಕಾಯುತ್ತಿದ್ದಾರೆ.

ಮಾಹಿತಿಯೇ ಇರಲ್ಲ:

ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಮಂಜೂರಾದ ಹಣವಾಗಲಿ, ಆಗಬೇಕಿರುವ ಹಣದ್ದಾಗಲೀ ಯಾವುದೇ ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಅಥವಾ ಮಧ್ಯವರ್ತಿ ಬ್ಯಾಂಕ್‌ಗೆ ಮಾಹಿತಿ ನೀಡುವುದಿಲ್ಲ. ಕಳೆದ ವರ್ಷದ ಹಾನಿಯನ್ನು ತೋಟಗಾರಿಕೆ ಇಲಾಖೆ ಲೆಕ್ಕಾಚಾರ ಹಾಕಿದ್ದರೂ ಈ ಮಾಹಿತಿಗೆ ಇನ್ಸೂರೆನ್ಸ್‌ನಲ್ಲಿ ಮಹತ್ವ ಇರುವುದಿಲ್ಲ. ಕೆಎಸ್‌ಎನ್ಎಂಡಿಸಿ ಸೂಚಿಸಿದ ಮಳೆ ಮಾಹಿತಿ, ಹವಾಮಾನ ಮಾಹಿತಿಯೇ ಬೆಳೆ ವಿಮೆ ಮಂಜೂರಿಯ ಮಾನದಂಡವಾಗಿರುತ್ತದೆ. ಹೀಗಾಗಿ, ಬೆಳೆ ವಿಮೆ ಮಂಜೂರಾದರೆ, ಆ ಹಣ ರೈತರ ಖಾತೆಗೆ ಜಮಾ ಆದ ಮೇಲೆ ತೋಟಗಾರಿಕೆ ಇಲಾಖೆ, ಡಿಸಿಸಿ ಬ್ಯಾಂಕ್‌ಗೆ ಗೊತ್ತಾಗುತ್ತದೆ. ಕಳೆದವರ್ಷ ಜಿಲ್ಲೆಯ ಬೆಳೆ ವಿಮೆಯ ಜವಾಬ್ದಾರಿಯನ್ನು ಎಐಸಿ ಕಂಪನಿ ವಹಿಸಿದ್ದು, ಈ ವರೆಗೂ ರೈತರಿಗೆ ಯಾವುದೇ ಖುಷಿಯ ಸುದ್ದಿ ನೀಡಿಲ್ಲ.

ಇಂದು ರಸ್ತೆ ತಡೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೂ ಬೆಳೆ ವಿಮೆ ಪರಿಹಾರ ಮಂಜೂರಾಗದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಾಸನಕೊಪ್ಪದಲ್ಲಿ ಸೋಮವಾರ ರಸ್ತೆ ತಡೆ ನಡೆಸಲು ನಿರ್ಧರಿಸಿದೆ. ಸಂಕಷ್ಟ ಎದುರಿಸುತ್ತಿರುವ ರೈತರ ಸಹಕಾರಕ್ಕೆ ಆಗಮಿಸುವಂತೆ ಪ್ರತಿಭಟನೆ ಮೂಲಕ ಗಮನಸೆಳೆಯಲು ನಿರ್ಧರಿಸಿದೆ.ಬೆಳೆ ವಿಮೆ ಪರಿಹಾರದ ನಿರೀಕ್ಷೆಯಲ್ಲಿ ನಾವಿದ್ದೇವೆ. ಕಳೆದ ವರ್ಷ ನವೆಂಬರ್ ವೇಳೆಗೆ ರೈತರ ಖಾತೆಗೆ ವಿಮಾ ಕಂಪನಿ ಹಣ ಜಮಾ ಮಾಡಿದ್ದು, ಈ ವರ್ಷವೂ ಮಂಜೂರಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಎಂದು ತೋಟಗಾರಿಕೆ ಇಲಾಖೆಯ ಡಿಡಿ ಬಿ.ಪಿ. ಸತೀಶ ಹೇಳಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ