ಹೊನ್ನಾವರ: ನಮ್ಮದು ಸುಶಿಕ್ಷಿತರ ಜಿಲ್ಲೆ, ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರು ಕೆಲವೊಂದು ವಿಚಾರದಲ್ಲಿ ಉತ್ತರ ಕರ್ನಾಟಕಕ್ಕಿಂತ ನಾವು ಹಿಂದೆ ಉಳಿದಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಹಾಗೂ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಪಟ್ಟಣದ ಹೋಲಿ ರೋಸರಿ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ಸೋಮವಾರ ನಡೆದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 2023-24ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು. ಕರಾವಳಿಯಲ್ಲಿರಬೇಕಾದ ಮೀನುಗಾರಿಕೆ ಯುನಿವರ್ಸಿಟಿ ವಿಜಯಪುರದಲ್ಲಿರುವುದು ವಿಪರ್ಯಾಸ. ನಮ್ಮಲ್ಲಿ ಕನಿಷ್ಠ ಒಂದೇ ಒಂದು ಮೀನುಗಾರಿಕೆ ವಿಶ್ವ ವಿದ್ಯಾಲಯ ಇಲ್ಲ ಎಂದರು.ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಜೆ. ನಾಯ್ಕ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಪಾಲಕ-ಪೋಷಕರ ಗುರುತರ ಜವಾಬ್ದಾರಿಯಾಗಿದೆ. ಹೊನ್ನಾವರದ ನೆಲ ಯಕ್ಷಗಾನ ಕಲಾವಿದ ಚಿಟ್ಟಾಣಿ ಹೆಗಡೆ ಅವಂಥ ಅನೇಕ ಪ್ರತಿಭೆಗಳನ್ನು ನೀಡಿದೆ. ಇಂತಹ ಸ್ಥಳದಲ್ಲಿ ಪ್ರತಿಭಾ ಕಾರಂಜಿ ಯಶಸ್ವಿಯಾಗಿ ಆಯೋಜನೆಯಾಗಿ ಇದು ಇತರರಿಗೆ ಮಾದರಿಯಾಗಲಿದೆ ಎಂದರು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ನಾಯ್ಕ, ಪ್ರತಿಭೆಗಳು ಬೆಳಗಲು ನಾವೆಲ್ಲ ಕಾರಣೀಭೂತರಾಗೋಣ ಎಂದರು.ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಪ್ರತಿಭೆಗಳು ಪೋಷಿಸುವ ಜತೆಗೆ ಕಮರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಪಂ ಸದಸ್ಯೆ ಮೇಧಾ ನಾಯ್ಕ ಮಾತನಾಡಿ, ಶಿಲ್ಪಿ ಉಳಿಪೆಟ್ಟು ನೀಡಿ ಶಿಲೆಯನ್ನು ಮೂರ್ತಿಯಾಗಿ ರೂಪಿಸಿದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ನಾಲ್ಕಾರು ಜನ ಪೂಜಿಸುವ ಮೂರ್ತಿಯಂತೆ ಮಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ. ನಮ್ಮ ಕಲಿಕೆ ಅವಧಿಯಲ್ಲಿ ಒಳ್ಳೆಯ ಗುರುವು ಸಿಗುವುದು ಅದೃಷ್ಟವೇ ಸರಿ. ಪ್ರತಿಭಾ ಕಾರಂಜಿಯಲ್ಲಿ ಆಯ್ಕೆಯಾದವರು ರಾಜ್ಯಮಟ್ಟಕ್ಕೆ ತಲುಪಿ ಜಯಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ನಾಯ್ಕ, ಎಂ.ಡಿ. ಹರಿಕಾಂತ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಜಿಲ್ಲಾ ಉಪನಿರ್ದೇಶಕಿ ಲತಾ ನಾಯ್ಕ, ಬಿಇಒ ಜಿ.ಎಸ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದ ಗಾಂವ್ಕರ್, ತಾಲೂಕು ಅಧ್ಯಕ್ಷ ಎಂ.ಜಿ. ನಾಯ್ಕ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಆರ್.ಟಿ. ನಾಯ್ಕ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಎಲ್.ಎಂ. ಹೆಗಡೆ, ಸಾಧನಾ ಬರ್ಗಿ, ಬಾಬು ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಆನಂತರ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಯುವಜನ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.