ಹಗರಿಬೊಮ್ಮನಹಳ್ಳಿ ಜಲಾಶಯದ ಅಂಗಳದಲ್ಲಿ ಕ್ರೌಂಚ ಹಕ್ಕಿಗಳ ಕಲರವ

KannadaprabhaNewsNetwork |  
Published : Feb 20, 2026, 02:15 AM IST
ಹಗರಿಬೊಮ್ಮನಹಳ್ಳಿ ಜಲಾಶಯದ ಅಂಗಳದಲ್ಲಿ ಕಂಡು ಬಂದಿರುವ ಕ್ರೌಂಚ ಪಕ್ಷಿಗಳು | Kannada Prabha

ಸಾರಾಂಶ

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಕ್ರೌಂಚ ಪಕ್ಷಿಗಳ ವಲಸೆಯ ತಾಣ ಎಂಬ ಹೆಗ್ಗಳಿಕೆಗೆ ಜಲಾಶಯದ ಅಂಗಳ ಪಾತ್ರವಾಗಿದೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ರೈತರ ಜೀವನಾಡಿ ಎನಿಸಿರುವ ಹಗರಿಬೊಮ್ಮನಹಳ್ಳಿ ಜಲಾಶಯದ ಅಂಗಳವೀಗ ದೂರದ ಸೈಬೀರಿಯಾ ಮತ್ತು ಮಂಗೋಲಿಯಾ ದೇಶದಿಂದ ಹಾರಿ ಬಂದಿರುವ ಕ್ರೌಂಚ (ಡೆಮೊಸೆಲ್ ಕ್ರೇನ್) ಪಕ್ಷಿಗಳ ಕಲರವಕ್ಕೆ ಸಾಕ್ಷಿಯಾಗಿದೆ.

೨೦೨೦ರಲ್ಲಿ ಕೇವಲ ೧೦ ಕ್ರೌಂಚ ಪಕ್ಷಿಗಳು ಇಲ್ಲಿ ಕಂಡು ಬಂದಿದ್ದವು. ಆದರೆ, ಈಗ ಬರೋಬ್ಬರಿ ಎರಡು ಸಾವಿರಕ್ಕೂ ಹೆಚ್ಚು ಕ್ರೌಂಚ ಪಕ್ಷಿಗಳು ಆಹಾರ ಅರಸಿ ಜಲಾಶಯದ ಅಂಗಳದಲ್ಲಿ ಬೀಡು ಬಿಟ್ಟಿವೆ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಕ್ರೌಂಚ ಪಕ್ಷಿಗಳ ವಲಸೆಯ ತಾಣ ಎಂಬ ಹೆಗ್ಗಳಿಕೆಗೆ ಜಲಾಶಯದ ಅಂಗಳ ಪಾತ್ರವಾಗಿದೆ.

ಸೂರ್ಯಕಾಂತಿ ಮತ್ತಿತರ ಧಾನ್ಯಗಳ ಬೆಳೆಗಳ ಕಟಾವಿನ ನಂತರ ಹೊಲಗಳಲ್ಲಿ ಸಿಗುವ ಆಹಾರ ಧಾನ್ಯಗಳನ್ನು ಈ ಪಕ್ಷಿಗಳು ಸೇವಿಸುತ್ತವೆ. ದಾಹ ತಣಿಸಲು ಜಲಾಶಯದ ಗುಂಡಿಗಳಲ್ಲಿ ನಿಂತಿರುವ ನೀರು ಸಹಕಾರಿಯಾಗಿರುವಂತೆಯೇ ಗುಂಡಿಗಳಲ್ಲಿನ ಏಡಿ, ಮೀನು ಮತ್ತು ಮೃದ್ವಂಗಿ ಮತ್ತಿತರ ಜಲಚರಗಳನ್ನೂ ಈ ಪಕ್ಷಿಗಳು ಭಕ್ಷಿಸುತ್ತವೆ.

ರಷ್ಯಾ ಬಳಿಯ ಮಂಗೋಲಿಯಾ ಮತ್ತು ಸೈಬೀರಿಯಾ ದೇಶಗಳಲ್ಲಿ ಈಗ ವಿಪರೀತ ಚಳಿ ಹಾಗೂ ಆಹಾರದ ಕೊರತೆಯ ಕಾರಣಕ್ಕೆ ಅಲ್ಲಿಂದ ವಲಸೆ ಹೊರಟ ಹಕ್ಕಿಗಳು ೪೮೦೦ ಕಿಮೀ ದೂರದ ಜಲಾಶಯದ ಅಂಗಳದಲ್ಲಿ ಆಹಾರಕ್ಕಾಗಿ ಬೀಡು ಬಿಟ್ಟಿದ್ದು, ಸಂತಾನೋತ್ಪತ್ತಿಗಾಗಿ ಕ್ರೌಂಚ ಹಕ್ಕಿಗಳು ಮರಗಳನ್ನು ಹುಡುಕಿ ಗೂಡು ಕಟ್ಟಲು ಮತ್ತೆ ವಲಸೆ ಹೊರಡುವ ಧಾವಂತದಲ್ಲಿವೆ.

ಜಲಾಶಯದ ಅಂಗಳದಲ್ಲಿನ ನೀರು ಬತ್ತುತ್ತಿದ್ದು, ಬೆರಳೆಣಿಕೆಯಷ್ಟು ಉಳಿದಿರುವ ಗುಂಡಿಗಳಲ್ಲಿ ನೀರಿಗಾಗಿ ದನ, ಕರುಗಳು ಲಗ್ಗೆ ಇಡುತ್ತಿವೆ. ಮೀನಿಗಾಗಿ ಬಲೆ ಒಡ್ಡಲು ಜನರ ಪ್ರವೇಶವೂ ಹೆಚ್ಚಾಗುತ್ತಿದ್ದು, ಪಕ್ಷಿಗಳು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.

ಅಪರೂಪದ ಪಕ್ಷಿ ಸಂಕುಲ ಸುರಕ್ಷಿತವಾಗಿ ಇರಲು ಅರಣ್ಯ ಇಲಾಖೆ ಮತ್ತು ಸಮುದಾಯದ ಸಹಾಯ ಅಗತ್ಯವಾಗಿದೆ. ಜಲಾಶಯದ ಅಂಗಳ ಸುರಕ್ಷತೆ ಎನಿಸಿದರೆ ಮಾತ್ರ ಮತ್ತೆ ಮುಂದಿನ ಚಳಿಗಾಲದಲ್ಲಿ ಕ್ರೌಂಚ ಪಕ್ಷಿಗಳ ನಿನಾದ ಕೇಳಬಹುದು. ಈ ನಿಟ್ಟಿನಲ್ಲಿ ಮೀನುಗಾರಿಕೆ ನಿಲ್ಲಿಸಿ ಕ್ರೌಂಚ ಪಕ್ಷಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ ಎನ್ನುತ್ತಾರೆ ತಾಲೂಕಿನ ಪಕ್ಷಿ ಪ್ರೇಮಿಗಳು.

ಕ್ರೌಂಚ ಹಕ್ಕಿಗಳು ಬೀಡು ಬಿಟ್ಟಿರುವ ಅಂಗಳದಲ್ಲಿ ನಾಯಿಗಳು ಲಗ್ಗೆ ಇಡುತ್ತಿವೆ. ದೂರದಿಂದ ಬಂದಿರುವ ಕ್ರೌಂಚ ಹಕ್ಕಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಕ್ರೌಂಚ ಹಕ್ಕಿಗಳು ಪರಿಸರಕ್ಕೆ ಪೂರಕವಾಗಿವೆ. ಹಕ್ಕಿಗಳು ಉಳಿದರೆ ಪ್ರಕೃತಿ ಉಳಿಯುತ್ತದೆ. ರೈತರ ಭವಿಷ್ಯವೂ ಹಸನಾಗುತ್ತದೆ ಎನ್ನುತ್ತಾರೆ ಪಕ್ಷಿಪ್ರೇಮಿ ಹುರಕಡ್ಲಿ ಶಿವಕುಮಾರ್.

ಜಲಾಶಯದ ಅಂಗಳದಲ್ಲಿರುವ ದನಗಳ ಹಿಂಡನ್ನು ಚದುರಿಸಲು ಅರಣ್ಯ ಇಲಾಖೆ ಕಾವಲುಗಾರನನ್ನು ಇರಿಸಿ ಕ್ರೌಂಚ ಹಕ್ಕಿಗಳ ರಕ್ಷಣೆಗೆ ಕ್ರಮ ವಹಿಸಬೇಕಾಗಿದೆ. ದೂರದಿಂದ ಹಾರಿ ಬರುವ ಬಾನಾಡಿಗಳನ್ನು ಮನೆ ಮಕ್ಕಳಂತೆ ನೋಡಬೇಕಾಗಿದೆ. ಕ್ರೌಂಚ ಹಕ್ಕಿಗಳ ನಿನಾದ ಕಲರವ ಕೇಳಲು ಬರುವ ಪಕ್ಷಿ ಪ್ರೇಮಿಗಳು ಕ್ರೌಂಚ ಹಕ್ಕಿಗಳ ರಕ್ಷಣೆಗೂ ಮುಂದಾಗಬೇಕು ಎನ್ನುತ್ತಾರೆ ಪಕ್ಷಿಪ್ರೇಮಿ -ಅಂಬಣ್ಣ ಮಡಿವಾಳರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ?
ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ!