ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಪಟ್ಟಣದಲ್ಲಿ ₹8.30 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಿದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಹಲವು ತಿಂಗಳು ಕಳೆದರೂ ಉದ್ಘಾಟನೆಯ ಭಾಗ್ಯ ಕಾಣದೇ ಕಸ, ಕಂಟಿಗಳ ಜೊತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು 2023ರ ಜೂನ್‌ನಲ್ಲಿ ಆರಂಭಿಸಿ 2025ರ ಡಿಸೆಂಬರ್‌ನಲ್ಲಿ ಸಕಲ ಸೌಲಭ್ಯಗಳಿಂದ ಪೂರ್ಣಗೊಳಿಸಿದೆ. 2620 ಚದರ ಮೀಟರ್ ವಿಸ್ತೀರ್ಣದಲ್ಲಿ 30 ಹಾಸಿಗೆಗಳ ಎರಡು ಸಾಮಾನ್ಯ ವಾರ್ಡ್, ಶಸ್ತ್ರಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿ, ಪ್ರಸೂತಿ, ತಪಾಸಣೆಗಾಗಿ ಪ್ರತ್ಯೇಕ ಕೋಣೆ, ಹೊರರೋಗಿಗಳಿಗೆ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಕೋಣೆ, ಲ್ಯಾಬೋರೇಟರಿ, ಮೆಡಿಕಲ್ ಸ್ಟೋರ್, ಮೀಟಿಂಗ್ ಹಾಲ್ ಕಮ್ ಆಫೀಸ್, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಆಸ್ಪತ್ರೆಯಲ್ಲಿ ನಿರಂತರ ವಿದ್ಯುತ್‌ಗಾಗಿ ಜನರೇಟರ್ ವ್ಯವಸ್ಥೆಯನ್ನು ಕಟ್ಟಡ ಒಳಗೊಂಡಿದೆ. ಆದರೆ, ಕಟ್ಟಡ ಪೂರ್ಣಗೊಂಡು 3 ತಿಂಗಳು ಕಳೆದರೂ ಆಸ್ಪತ್ರೆ ಉದ್ಘಾಟನೆಯಾಗದೇ ಕಟ್ಟಡದ ಸುತ್ತ ಗಿಡಗಂಟಿ, ಹುಲ್ಲು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ.ಹಳೆ ಆಸ್ಪತ್ರೆಯಲ್ಲೇ ಸೇವೆ:ನೂತನ ಕಟ್ಟಡ ಉದ್ಘಾಟನೆಗೊಳ್ಳದೇ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಇಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಹಿಂದೆ ಇದ್ದ ಸ್ಥಿತಿ ಈಗಿಲ್ಲ. ಸದ್ಯ ಈ ಆಸ್ಪತ್ರೆಯಲ್ಲಿ ಹಿಂದೆ ಇದ್ದ ಔಷಧ ದಾಸ್ತಾನು ಕೋಣೆ, ಹೆರಿಗೆ ಕೋಣೆ, ಮಹಿಳಾ ವಾರ್ಡ್, ಶೀತಲ ಕೋಣೆ, ಚುಚ್ಚುಮದ್ದು ಕೊಠಡಿಗಳೆಲ್ಲ ಇವೆ. ಆದರೆ, ಉಪಯೋಗಕ್ಕೆ ಯೋಗ್ಯವಾಗಿಲ್ಲ. ತೀವ್ರ ಸ್ವರೂಪದ ಗಾಯಗೊಂಡವರನ್ನು, ಪ್ರಸೂತಿಗಾಗಿ ಮಹಿಳೆಯರನ್ನು ಸಿಂದಗಿ ಹಾಗೂ ವಿಜಯಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸುವುದು ಅನಿವಾರ್ಯವಾಗಿದೆ. ಇರುವ ಒಬ್ಬರು ಎಂಬಿಬಿಎಸ್ ಆಯುಷ್ ವೈದ್ಯಾಧಿಕಾರಿಯು ಆಸ್ಪತ್ರೆಯ ಎಲ್ಲ ಉಸ್ತುವಾರಿ ನೋಡಿಕೊಳ್ಳುವ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಮೂವರು ಸಿಬ್ಬಂದಿ ಹಾಗೂ ಕೆಲವರು ಗುತ್ತಿಗೆ ಆಧಾರದ ಮೇಲೆ ಇದ್ದಾರೆ.ಹೈಟೆಕ್ ಸ್ಪರ್ಶ:
ಜನಸಾಮಾನ್ಯರಿಗೆ ಅನುಕೂಲ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಿಸಲಾದ ಕೋಟ್ಯಂತರ ರುಪಾಯಿ ವೆಚ್ಚದ ಸರ್ಕಾರಿ ಕಟ್ಟಡ ಉದ್ಘಾಟಿಸಿ ಸಾರ್ವಜನಿಕರಿಗೆ ಸದುಪಯೋಗವಾಗಬೇಕೆಂದು ಮುಖಂಡರುಗಳಾದ ಮುನೀರ್ ಅಹ್ಮದ್ ಮಳಖೇಡ, ಗುರುರಾಜ ಆಕಳವಾಡಿ, ಕಾಸು ಕೋರಿ, ಶಿವರಾಜ ತಳವಾರ, ರಹಿಮಾನ್ ಕನಕಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ಈ ಕಾರ್ಯವನ್ನು ಸಾರ್ವಜನಿಕರಿಗೆ ಅರ್ಪಿಸುತ್ತಿರುವುದು ತೃಪ್ತಿ ತಂದಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ತಿಳಿಸಿ, ಆದಷ್ಟು ಬೇಗ ಸಂಬಂಧಪಟ್ಟ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಉದ್ಘಾಟನೆ ನೆರವೇರಿಸಲಾಗುವುದು.
ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿದ್ದರು. ಹಾಲಿ ಶಾಸಕರಾದ ರಾಜುಗೌಡ ಪಾಟೀಲ ಅವರಿಂದ ಹೆಚ್ಚಿನ ಮೂಲ ಸೌಲಭ್ಯ, ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಉತ್ತಮ ಚಿಕಿತ್ಸೆ ದೊರೆಯುವಂತಾಗಲಿ.
-ಸಂಪತ್ ಗುಣಾರಿ,