ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆಯಿಂದ ಮಂಗಳವಾರ ಬೀದರ್ ನಗರದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ನೆಲೆಯಾಗಿರುವ ಬೀದರ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳು ನೀಡಿದ ಗೌರವ ಮತ್ತು ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕದಾದ್ಯಂತ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಶಾಸಕರ ವೇದಿಕೆಯು ಆತ್ಮೀಯತೆಯಿಂದ ಬೀದರ್‌ಗೆ ಆಹ್ವಾನಿಸಿ ಸನ್ಮಾನಿಸಿರುವುದು ತಮ್ಮ ರಾಜಕೀಯ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ ಎಂದು ಎನ್.ಎ. ಹ್ಯಾರಿಸ್ ಬಣ್ಣಿಸಿದರು.
ಈ ಸನ್ಮಾನವನ್ನು ಕೇವಲ ಅಭಿನಂದನೆಯಾಗಿ ಸ್ವೀಕರಿಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಮುದಾಯದಲ್ಲಿ ಒಗ್ಗಟ್ಟು ಮತ್ತು ಪ್ರಗತಿಗಾಗಿ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಹೊಣೆಗಾರಿಕೆಯಾಗಿ ಸ್ವೀಕರಿಸುತ್ತೇನೆ ಎಂದು ಅವರು ತಿಳಿಸಿದರು.ಎರಡು ದಿನಗಳ ಪ್ರವಾಸ: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಎರಡು ದಿನ ಪ್ರವಾಸ ಕೈಗೊಂಡಿದ್ದ ಎನ್.ಎ.ಹ್ಯಾರಿಸ್ ಅವರು ಕಾಂಗ್ರೆಸ್ ಪಕ್ಷದ ಹಲವು ಮುಖಂಡರನ್ನು, ಕಾರ್ಯಕರ್ತರನ್ನು ಸ್ಥಳೀಯ ಜನಪ್ರತಿನಿಧಿಗಳನ್ನು, ಧಾರ್ಮಿಕ ನಾಯಕರುಗಳನ್ನು ಭೇಟಿ ಮಾಡಿದರು. ಹಲವು ಶ್ರದ್ಧಾಕೇಂದ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಸೆಂಟ್ ಪೌಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ಗೆ ಪ್ರಯಾಣ ಬೆಳೆಸಿ, ಚರ್ಚ್‌ನ ಧಾರ್ಮಿಕ ಮುಖಂಡರು ಹಾಗೂ ಸಮುದಾಯದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಬೀದರ್ ನಗರದ ಶಾಹೀನ್ ಗ್ರೂಪ್ ಶಿಕ್ಷಣ ಸಂಸ್ಥೆಗೆ ತೆರಳಿ, ಸಮೂಹದ ಮುಖ್ಯಸ್ಥರು ಸೇರಿದಂತೆ ಹಲವರೊಂದಿಗೆ ಚರ್ಚಿಸಿದರು. ಬಳಿಕ ನಗರದ ಮನಿಯಾರ್ ತಾಲೀಮ್ ನಲ್ಲಿರುವ ಜಾಮಿಯಾ ಇಸ್ಲಾಮಿಯಾ ಮದೀನತ್ ಉಲ್ ಉಲೂಮ್ ನಲ್ಲಿ ಮದರಸಾ ಪ್ರತಿನಿಧಿಗಳು ಮತ್ತು ಉಲೇಮಾ ಗಳೊಂದಿಗೆ ಸಂವಾದ ನಡೆಸಿದರು.
ನೂತನವಾಗಿ ಆರಂಭಗೊಂಡ ಅರ್ವಿತಾ ಆಸ್ಪತ್ರೆಯ ಶುಭಾರಂಭ ಸಮಾರಂಭದಲ್ಲಿ ಪಾಲ್ಗೊಂಡು, ಆಸ್ಪತ್ರೆಯ ಮಾಲೀಕರು ಹಾಗೂ ಆಡಳಿತ ಮಂಡಳಿಗೆ ಶುಭ ಕೋರಿದರು. ಸರ್ವಧರ್ಮ ಸಮನ್ವಯದ ಪ್ರತೀಕವಾದ ಹಜರತ್ ಮುಲ್ತಾನಿ ಬಾದ್ ಷಾ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.