- ನನ್ನ ರೋಲ್ ಮಾಡೆಲ್ ಸಿದ್ದರಾಮಯ್ಯ ಕರೆ ಮಾಡಿದರೂ ಕಣದಿಂದ ಹಿಂದೆ ಸರಿಯಲ್ಲ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಹೋರಾಟದಿಂದಲೇ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನನಗೆ ರೋಲ್ ಮಾಡೆಲ್ ಆಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರನಾಗಿ ಏ.12ರಂದು ಸಾಂಕೇತಿಕ ಹಾಗೂ ಏ.18ರಂದು ಬೆಂಬಲಿಗರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ 2ನೇ ನಾಮಪತ್ರ ಸಲ್ಲಿಸಲಿದ್ದೇನೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ, ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಸ್ಪಷ್ಟಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ತಾವು ದಾವಣಗೆರೆ ಕ್ಷೇತ್ರಕ್ಕೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರೆ ಮಾಡಿದರೂ ನನ್ನ ನಿರ್ಧಾರವನ್ನು ಮಾತ್ರ ಬದಲಿಸುವುದಿಲ್ಲ ಎಂದರು.ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯನವರು ನನಗೆ ಸ್ಪರ್ಧಿಸುವುದು ಬೇಡವೆಂದಿದ್ದು ನಿಜ. ಇಬ್ಬರ ಬಗ್ಗೆಯೂ ನನಗೆ ಭಕ್ತಿ, ಗೌರವ ಇದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ವೈಯಕ್ತಿಕ ನಿರ್ಧಾರ. ಸ್ಪರ್ಧೆ ಮಾಡದಂತೆ ಈಗಲೂ ನನಗೆ ಸಾಕಷ್ಟು ಕರೆ ಬರುತ್ತಲೇ ಇದೆ. ಗಟ್ಟಿ ನಿರ್ಧಾರ ಮಾಡಿದ್ದಾಗಿದೆ. ಏ.12ರಂದು ಮೊದಲ ನಾಮಪತ್ರ ಸಲ್ಲಿಸಿ, ಏ.18ರಂದು ಬೆಂಬಲಿಗರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ, ಎರಡನೇ ನಾಮಪತ್ರ ಸಲ್ಲಿಸುವೆ ಎಂದರು.
ಎರಡು ಕುಟುಂಬಗಳು ಬಂಡವಾಳಶಾಹಿ ಸಾಮ್ರಾಜ್ಯ ಕಟ್ಟಿಕೊಂಡಿರುವ ಜಿಲ್ಲೆ ಇದಾಗಿದೆ. ರಾಜಕೀಯವೆಂಬುದೇ ಈ ಕುಟುಂಬಗಳ ಗುಲಾಮವಾಗಿದೆ. ಎಲ್ಲ ನಿರ್ಣಯಗಳನ್ನು ಇವೇ ಕುಟುಂಬಗಳು ಕೈಗೊಳ್ಳುತ್ತಿದೆ. 3-4 ದಶಕದಿಂದ ರಾಜಕಾರಣದಲ್ಲಿರುವ ಎರಡೂ ಕುಟುಂಬಗಳು ಸಾಕಷ್ಟು ವ್ಯಾಪಾರ, ಉದ್ಯಮ, ಸಂಸ್ಥೆಗಳನ್ನು ಬೆಳೆಸಿಕೊಂಡಿವೆ. ಅವುಗಳ ರಕ್ಷಣೆಯೇ ಎರಡೂ ಕಡೆಯವರ ಆದ್ಯತೆಯಾಗಿದೆ. ಜನಸೇವೆ ಎಂಬುದೇ ಇಂಥವರಿಗೆ ಕೊನೆಯ ಆದ್ಯತೆಯಾಗಿದೆ. ಹಾಗಾಗಿ ಕ್ಷೇತ್ರದ ಜನರೂ ಬೇಸತ್ತಿದ್ದು, ಕುಟುಂಬ ರಾಜಕಾರಣದ ವಿರುದ್ಧ ಜನರ ಮನಸ್ಸು ಬೂದಿ ಮುಚ್ಚಿದ ಕೆಂಡದಂತಿದೆ. ದಾವಣಗೆರೆ ಕ್ಷೇತ್ರ ಅಚ್ಚರಿಯ ಫಲಿತಾಂಶ ತರಲಿದೆ ಎಂದು ಹೇಳಿದರು.ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಪ್ರಾದೇಶಿಕ ಅಸಮಾನತೆ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ. 3-4 ದಶಕದಿಂದ ಜನರಿಗೆ ಪರ್ಯಾಯ ಆಯ್ಕೆ, ಅವಕಾಶ ಇರಲಿಲ್ಲ. ಇದೇ ಎರಡು ಕುಟುಂಬಕ್ಕೆ ಟಿಕೆಟ್ ಸಿಗುತ್ತಿತ್ತು. ರಾಜಕೀಯ ಪಕ್ಷಗಳು ಸಹ ಇಂತಹ ಕುಟುಂಬಗಳನ್ನು ಎದುರು ಹಾಕಿಕೊಂಡು ಟಿಕೆಟ್ ನೀಡುವ ಸ್ಥಿತಿಯಲ್ಲಿರಲಿಲ್ಲ. ನಾನು ಸ್ಪರ್ಧೆ ಮಾಡಬೇಕೆಂಬುದು ಲಕ್ಷಾಂತರ ಜನರ ಅಪೇಕ್ಷೆ. ಆಯ್ಕೆ ಮಾಡಿದರೆ ಹೊಸ ರಾಜಕೀಯ ಇತಿಹಾಸ ಬರೆದ, ಪುಣ್ಯ ಮತದಾರರದ್ದಾಗಲಿದೆ ಎಂದು ತಿಳಿಸಿದರು.
ಬಾಲ್ಯದಿಂದಲೂ ನಾನು ಪಟ್ಟಿರುವ ಕಷ್ಟವನ್ನು ಮುಂದೆ ಯಾರೂ ಪಡಬಾರದು. ಶಿಕ್ಷಣ, ಅಭಿವೃದ್ಧಿ, ಘನತೆ, ಗೌರವ ಪ್ರತಿಯೊಬ್ಬರಿಗೂ ಸಿಗಬೇಕು. ನನಗೆ ಯಾವುದೇ ಸ್ವಾರ್ಥ, ಪ್ರತಿಷ್ಠೆ ಇಲ್ಲ. ಹೊಸಬರಿಗೆ, ಬಡ ಕುಟುಂಬದ ಹಿನ್ನೆಲೆಯವರಿಗೆ, ರಾಜಕೀಯ ಹಿನ್ನೆಲೆ ಇಲ್ಲದವರಿಗೆ ಅವಕಾಶ ಸಿಗಬೇಕು. ನನ್ನ ಸ್ಪರ್ಧೆ ಬೇರೆಯವರಿಗೂ ಸ್ಫೂರ್ತಿ ಆಗಬೇಕೆಂಬುದೇ ನನ್ನ ಉದ್ದೇಶ ಎಂದು ಜಿ.ಬಿ.ವಿನಯಕುಮಾರ ಮನವಿ ನುಡಿದರು.- - - ಟಾಪ್ ಕೋಟ್ ಕಾಂಗ್ರೆಸ್ಸಿನಿಂದ ಕತ್ತೆ ನಿಂತರೂ ಗೆಲ್ಲುತ್ತದೆಂಬ ಮಾತು, ಮೋದಿಯವರಿಗೆ ಪ್ರಧಾನಿ ಮಾಡಲು ಮತ ಹಾಕಿ ಎಂಬ ಪ್ರಚಾರ ತಂತ್ರಗಳು ಈ ಸಲ ಕೆಲಸ ಮಾಡಲ್ಲ. ಜನರ ಕೈಗೆ ಸುಲಭವಾಗಿ ಸಿಗುವ ಸ್ಥಳೀಯರನ್ನು ಗಮನಿಸಿ, ಜನ ಮತ ಹಾಕುತ್ತಾರೆ. ರಾಷ್ಟ್ರೀಯ ಪಕ್ಷಗಳು ಹಾಗೂ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಮತದಾರರಿಗೆ ನಾನು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪರ್ಯಾಯ ಆಯ್ಕೆಯಾಗಿದ್ದೇನೆ
- ಜಿ.ಬಿ.ವಿನಯಕುಮಾರ, ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ- - - -10ಕೆಡಿವಿಜಿ10:
ದಾವಣಗೆರೆಯಲ್ಲಿ ಬುಧವಾರ ಇನ್ ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಮ್ಮ ಬೆಂಬಲಿಗರು, ಮುಖಂಡರ ಸಭೆಯಲ್ಲಿ ಮಾತನಾಡಿದರು.