ತುರುವೇಕೆಯಲ್ಲಿ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ

KannadaprabhaNewsNetwork |  
Published : May 27, 2025, 11:54 PM ISTUpdated : May 27, 2025, 11:55 PM IST
26 ಟಿವಿಕೆ 1 – ತುರುವೇಕೆರೆಯ ಕೃಷ್ಣ ಚಿತ್ರಮಂದಿರದ ಬಳಿ ಗುಂಡಿ ಬಿದ್ದಿರುವುದು. | Kannada Prabha

ಸಾರಾಂಶ

ದಬ್ಬೇಘಟ್ಟ ರಸ್ತೆಯ ವೃತ್ತದಲ್ಲಿ ಬಾಯ್ತೆರೆದಿರುವ ಸೇತುವೆ. ಮತ್ತೊಂದು ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಕೃಷ್ಣ ಚಿತ್ರ ಮಂದಿರದ ಮುಂಭಾಗ ಬಿದ್ದಿರುವ ಗುಂಡಿಗಳು.

ಎಸ್.ನಾಗಭೂಷಣ, ಕನ್ನಡಪ್ರಭ ವಾರ್ತೆ ತುರುವೇಕೆರೆ

ಈ ರಸ್ತೇಲಿ ಹೆಂಗ್ರಿ ಓಡಾಡೋದು. ಎಲ್ಲೆಲ್ಲೂ ಸಾಲುಸಾಲು ಗುಂಡಿಗಳದ್ದೇ ಕಾರುಬಾರು. ಇಲ್ಲಿ ದಿನವೂ ಸಾವಿರಾರು ವಾಹನಗಳು ಓಡಾಡುತ್ತವೆ. ಸಾವಿರಾರು ಮಂದಿ ಪಾದಚಾರಿಗಳೂ ಓಡಾಡುತ್ತಾರೆ. ಏನಾದರೂ ಅಪಘಾತವಾಗಿ ಜೀವ ಹೋದರೆ ಯಾರ್ರೀ ಹೊಣೆ.

ಹೀಗೆ ಪಟ್ಟಣದ ಜನ ಆಡಳಿತವನ್ನು ಸಾಪಳಿಸಲು ಕಾರಣ ದಬ್ಬೇಘಟ್ಟ ರಸ್ತೆಯ ವೃತ್ತದಲ್ಲಿ ಬಾಯ್ತೆರೆದಿರುವ ಸೇತುವೆ. ಮತ್ತೊಂದು ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಕೃಷ್ಣ ಚಿತ್ರ ಮಂದಿರದ ಮುಂಭಾಗ ಬಿದ್ದಿರುವ ಗುಂಡಿಗಳು. ಇವುಗಳನ್ನು ನೋಡಿ ಹೀಗೆ ಪ್ರತಿ ಕ್ಷಣ ಜನರು ಗೊಣಗುತ್ತಲೇ ಇರುತ್ತಿದ್ದಾರೆ. ಇದು ಈ ರೀತಿ ಆಗಲು ಕಾರಣ ಸಮನ್ವಯದ ಕೊರತೆ. ಪಟ್ಟದೊಳಿಗೆ ಪಪಂನವರು ಮಾಡಲಿ ಎಂದು ಲೋಕೋಪಯೋಗಿ ಇಲಾಖೆ, ಇದು ಮುಖ್ಯ ರಸ್ತೆ ಲೋಕೋಪಯೋಗಿ ಇಲಾಖೆಯೇ ಮಾಡಲಿ ಎಂದು ಪಪಂ ಅಧಿಕಾರಿಗಳು. ಇವರಿಬ್ಬರ ಜಗಳದಲ್ಲಿ ಬಡವಾಗಿರುವುದು ನಿಯತ್ತಾಗಿ ಎಲ್ಲಾ ಸುಂಕ, ಕಂದಾಯಗಳನ್ನು ಕಟ್ಟುತ್ತಿರುವ ನಾಗರೀಕರು.

ಇತ್ತ ದಬ್ಬೇಘಟ್ಟ ರಸ್ತೆ ಅಗಲೀಕರಣದ ವೇಳೆ ಸುಮಾರು ಎರಡು ಕೋಟಿಯಷ್ಟು ಹಣ ರಸ್ತೆ ಅಗಲೀಕರಣಕ್ಕೆಂದು ವಿನಿಯೋಗವಾಗಿದೆ. ಆದರೆ ಉದ್ದೇಶ ಈಡೇರಲೇ ಇಲ್ಲ. ಹಣ ನೀರಿಗೆ ಹೋಮ ಮಾಡಿದಂತಾಯಿತು. ಹಣ ಖರ್ಚಾಯಿತೇ ವಿನಃ ಯಾವ ಪ್ರಯೋಜನವೂ ಆಗಲೇ ಇಲ್ಲ. ದಬ್ಬೇಘಟ್ಟ ರಸ್ತೆಯ ವೃತ್ತ ಅಗಲೀಕರಣ ಎಂಬುದು ಕನಸಾಗಿಗೇ ಉಳಿಯಿತು. ವಿದ್ಯುತ್ ಕಂಬ ಸ್ಥಳಾಂತರ ಮಾಡಲೂ ಸಹ ಹಣ ಮಂಜೂರಾಗಿತ್ತು. ಕಟ್ಟಡಗಳಿಗೆ ಸೂಕ್ತ ಪರಿಹಾರ ಕೊಡದ ಹೊರತು ಕಟ್ಟಡ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ಕಟ್ಟಡದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಹಾಗಾಗಿ ಕಟ್ಟಡ ತೆರವು ಕಾರ್ಯಾಚರಣೆ, ವಿದ್ಯುತ್ ಕಂಬ ಸ್ಥಳಾಂತರ ಎಲ್ಲಾ ನೆನೆಗುದಿಗೇ ಬಿತ್ತು. ಅದರ ಹಣ ಏನಾಯಿತೋ ದೇವರೇ ಬಲ್ಲ. ದಬ್ಬೇಘಟ್ಟ ರಸ್ತೆ ವೃತ್ತದ ಮುಂಭಾಗವೇ ಬಾಯ್ತೆರೆದಿರುವ ಸೇತುವೆಯನ್ನು ದುರಸ್ತಿ ಪಡಿಸಿ ಎಂದು ಅಂಗಲಾಚುತ್ತಿದ್ದರೂ ಸಹ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಗುಂಡಿ ಇರುವ ಜಾಗಕ್ಕೆ ಪೊಲೀಸ್ ಬ್ಯಾರಿಕೇಡ್ ಹಾಕಿ ಕೈತೊಳೆದುಕೊಂಡು ಕುಳಿತಿದ್ದಾರೆ. ಮೊದಲೇ ದಬ್ಬೇಘಟ್ಟ ರಸ್ತೆ ಕಿರಿದಾಗಿದೆ. ಇನ್ನು ಈ ಬ್ಯಾರಿಕೇಡ್ ಹಾಕಿದ ಮೇಲೆ ಕೇಳುವಂತೆಯೇ ಇಲ್ಲ. ಪ್ರತಿದಿನಾ ಜನರು ಅಪಘಾತಕ್ಕೀಡಾಗಿ ಸಂಕಟಪಡುತ್ತಿದ್ದಾರೆ. ಜೊತೆ, ಜೊತೆಗೇ ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಇತ್ತ ಕೃಷ್ಣ ಚಿತ್ರ ಮಂದಿರದ ಬಳಿಯಂತೂ ಹೊಂಡವೇ ನಿರ್ಮಾಣವಾಗಿದೆ. ಸುಮಾರು ಒಂದು ಅಡಿಗೂ ಹೆಚ್ಚು ಆಳದ, ಐದಾರು ಅಡಿ ಅಗಲ, ಉದ್ದದ ಗುಂಡಿಗಳು ಬಿದ್ದಿವೆ. ದ್ವಿಚಕ್ರ ವಾಹನವೋ, ನಾಲ್ಕು ಚಕ್ರದ ವಾಹನವೋ ಈ ಗುಂಡಿಯೊಳಗೆ ಇಳಿದರೆ ವಾಹನ ಜಖಂ ಆಗುವುದಂತೂ ಗ್ಯಾರಂಟಿ. ಮಳೆಗಾಲವಾಗಿರುವ ಈಗಂತೂ ವಾಹನಗಳು ಗುಂಡಿಯೊಳಗೆ ಇಳಿದರೆ ದಾರಿ ಹೋಕರ ಮೇಲೆ ಕೊಚ್ಚೆ ನೀರು ಹಾರಿ ಉಟ್ಟಿರುವ ಬಟ್ಟೆಗಳೆಲ್ಲಾ ಹಾಳಾಗಿ ಹೋಗಿ ಜನರಿಂದ ವಾಹನ ಸವಾರರು ಬೈಸಿಕೊಳ್ಳುವ ಸ್ಥಿತಿ ಇದೆ. ಇಷ್ಠೆಲ್ಲಾ ಸಮಸ್ಯೆಗಳು ಇದೆ ಎಂದು ಗೊತ್ತಿದ್ದರೂ ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಜವಾಬ್ದಾರಿ ಮರೆತು ನೆಮ್ಮದಿಯಿಂದ ಕುಳಿತಿದ್ದಾರೆ.

PREV

Recommended Stories

ನವದೆಹಲಿಯಲ್ಲಿ ರಾಣಿ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ರಾಷ್ಟ್ರಪತಿ ಬಿಡುಗಡೆ
ಬಿ.ಸಿ.ರೋಡ್‌: ಬ್ಲಾಕ್ ಕಾಂಗ್ರೆಸ್‌ನಿಂದ ನುಡಿನಮನ ಕಾರ್ಯಕ್ರಮ