20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಹೆಚ್.ಎಂ.ಮರುಳಸಿದ್ದಯ್ಯ ಪಟೇಲ್ ಅವರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ತರೀಕೆರೆ20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಅವರು ಜ್ಞಾನದ ಬುತ್ತಿಯನ್ನೇ ಹೊತ್ತು ತಂದಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ಹೇಳಿದರು.
20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಯೋಜಿತರಾಗಿರುವ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಅವರನ್ನು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ನಾಗೇಶ್ ಅವರ ಮನೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಹಿತಿಗಳಾಗಿ, ಸಂಸ್ಕೃತಿ ಚಿಂತಕರಾಗಿ ಸರಳ ಸ್ವಭಾವದವರಾಗಿ ನೀನು ಬೆಳೆದು ಇತರರನ್ನು ಬೆಳೆಸು ಎಂಬ ಧ್ಯೇಯ ವಾಕ್ಯವನ್ನು ಜನಸಮುದಾಯಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿರುವ ಡಾ. ಎಚ್.ಎಂ.ಮರುಳ ಸಿದ್ದಯ್ಯ ಅವರ ಶಿಸ್ತು ಶ್ರದ್ಧೆ ಮತ್ತು ಪ್ರತಿಭಾ ಸಾಮರ್ಥ್ಯ, ಆದರ್ಶ, ಅಪರೂಪದ ಮಾನವ ಶಾಸ್ತ್ರ ವಿಜ್ಞಾನಿ, ಯಶಸ್ಸಿನ ರೂವಾರಿಯಾಗಿರುವ ಅವರು ತುಂಬಿದ ಕೊಡ ಎಂದು ಬಣ್ಣಿಸಿದರು. ಸಾಮಾಜಿಕ, ಜಾನಪದ ಕ್ಷೇತ್ರ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಕೆಲಸ ಮಾಡಿ 20ಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲೀಷಿನಲ್ಲಿ ಪ್ರಕಟಿಸಿ ದೇಶವಿದೇಶಗಳಲ್ಲಿ ನಮ್ಮ ಕರ್ನಾಟಕದ ಬುಡಕಟ್ಟು ಮತ್ತು ಅಲೆಮಾರಿ ಜನಾಂಗಗಳ ಸಂಸ್ಕೃತಿ ವಿರಾಟ ಸ್ವರೂಪ ಪರಿಚಯಿಸಿರುವ ವಿನಯಶೀಲ ವಿದ್ವಾಂಸರಾಗಿದ್ದೀರಿ, ಡೆನ್ಮಾರ್ಕ್, ನಾರ್ವೆ, ಹಾಲೆಂಡ್ ದಕ್ಷಿಣ ಕೊರಿಯಾ ಮುಂತಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿ ತಾವೊಬ್ಬ ಅತ್ಯುತ್ತಮ ಸಂಶೋಧಕರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು. ಕೊರಗ ಜನಾಂಗದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಪಿ ಎಚ್ ಡಿ ಪದವಿ ಪಡೆದಿದ್ದಾರೆ, ಡಾ. ಮರುಳು ಸಿದ್ದಯ್ಯ ಪಟೇಲ್ ತರೀಕೆರೆ ತಾಲೂಕಿನ ಕಣ್ಮಣಿ. ಚಿಕ್ಕಮಗಳೂರು ಜಿಲ್ಲೆಯ ಜಾಣಪದ ಕಲೆಗಳಾದ ವೀರಗಾಸೆ, ಕೋಲಾಟ, ಚೌಡಕಿ ಮೇಳ, ಗೊಂಬೆಯಾಟ, ದೊಡ್ಡಾಟಗಳು, ಅಸಾದಿಗಳು ಮತ್ತು ಹಕ್ಕಿಪಿಕ್ಕಿ ಜನಾಂಗದವರ ಸಂಸ್ಕೃತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿದಂದವರು ಚಿಕ್ಕಮಗಳೂರು ಜಿಲ್ಲೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ ನಡೆನುಡಿಗಳಲ್ಲಿ ಸಾಮರಸ್ಯ ಹಾಗೂ ಸೃಜನಶೀಲ ಚಿಂತಕರಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ನಾಗೇಶ್ ಮಾತನಾಡಿ ಡಾ.ಮರುಳಸಿದ್ದಯ್ಯ ರವರ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆಯೇ ಎಲೆ ಮರೆ ಕಾಯಿನಂತೆ ಸಾಹಿತ್ಯ ಕೃಷಿ ಮಾಡುತ್ತಾ ಎತ್ತರದ ಮೇರು ಪರ್ವತವಾಗಿ ಬೆಳೆದಿದ್ದಾರೆ, ಅವರನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಗುರುತಿಸಿ, 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಕೂಡ ಸಂತೋಷವನ್ನುಂಟು ಮಾಡಿದೆ. ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತು ಪರಿಷತ್ತಿನ ಎಲ್ಲಾ ಸದಸ್ಯರಿಗೂ ತರೀಕೆರೆ ತಾಲೂಕು ಕಸಾಪ ಅಧ್ಯಕ್ಷ, ಪದಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕನ್ನಡ ಮಾತೆ ಶ್ರೀಭುವನೇಶ್ವರಿ ತೇರನ್ನು ಎಲ್ಲಾ ಕನ್ನಡ ಅಭಿಮಾನಿಗಳು ಸೇರಿ ಎಳೆಯೋಣ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮರಳು ಸಿದ್ದಯ್ಯ ಪಟೇಲ್ ನಮ್ಮ ಹಳ್ಳಿಗಳ ದಿನೇ ದಿನೇ ನಗರ ಮಾರುಕಟ್ಟೆ ಗಳೊಂದಿಗೆ ಬೆರೆತು ತಮ್ಮೂರಿನ ಸಂಸ್ಕೃತಿಗೆ ತಿಲಾಂಜಲಿ ನೀಡುತ್ತಿರುವ ಯುವ ಸಮುದಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂದಿನ ಯುವ ಪೀಳಿಗೆಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿ ಟಿವಿ ಮೊಬೈಲ್ ನೋಡುವ ಗೀಳು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ದಿನ ಕನ್ನಡ ಅಭಿಮಾನಿಗಳಾದ ಆರ್. ನಾಗೇಶ ಅವರ ಮನೆಯಲ್ಲಿ ಸನ್ಮಾನಿಸುತ್ತಿರುವುದು ಸಂತೋಷವಾಗಿದೆ. ಅವರ ಕುಟುಂಬ ವರ್ಗದವರಿಗೆ ತಾಯಿ ಭುವನೇಶ್ವರಿ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್. ಬಿ. ಆನಂದ್ ಕುಮಾರ್ ಭಾಗವಹಿಸಿದ್ದರು.
4ಕೆಟಿಆರ್.ಕೆ.1ಃ20ನೇ ಚಿಕ್ಗಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಅವರನ್ನು ಕರ್ನಾಟಕ ಜಾಪನದ ಪರಿಷತ್ ಅಧ್ಯಕ್ಷ ನಾಗೇಶ್ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಕುವೆಂಪು ವಿಶ್ವವಿದ್ಯಾನಿಲಯ ಜಾನಪದ ವಿದ್ವಾಂಸ ಡಾ.ಬಸವರಾಜ ನೆಲ್ಲಿಸರ ಇದ್ದರು.