ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಾಗ್ದಾಳಿ । ಸಿಎಂ ಐಸಿಯುನಲ್ಲಿದ್ದಾರೆಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯದ ಕಾಂಗ್ರೆಸ್ ಸರ್ಕಾರ ಕೋಮಾ ಸ್ಥಿತಿಯಲ್ಲಿದ್ದು, ಸಿಎಂ ಸಿದ್ದರಾಮಯ್ಯ ಐಸಿಯುನಲ್ಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಏಮ್ಸ್ ಆಸ್ಪತ್ರೆ ಇದ್ದಂತೆ. ಇದಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೆವಾಲ್ ಹಾಗೂ ಮಲ್ಲಿಕಾರ್ಜು ಖರ್ಗೆ ಅವರೇ ಮುಖ್ಯಸ್ಥರಾಗಿದ್ದಾರೆ. ರಾಜ್ಯ ಸರ್ಕಾರದ ಆಯುಷ್ಯವನ್ನು ಈ ಐವರು ನಿರ್ಧರಿಸುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ನ ಹೈಕಮಾಂಡ್‌ನ ಕೈಗೊಂಬೆಯಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ತಮ್ಮ ಧ್ವನಿಯನ್ನು ಕುಗ್ಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಸತ್ತಿದೆಯಾ ಎಂಬುದು ಗೊತ್ತಾಗುತ್ತಿಲ್ಲ. ಸುರ್ಜೆವಾಲ ಅವರೇ ರಾಜ್ಯದ ಮುಖ್ಯಮಂತ್ರಿ ರೀತಿ ವರ್ತಿಸುತ್ತಿದ್ದಾರೆ. ಸರ್ವಾಧಿಕಾರಿಯಾಗಿ ಸಚಿವರ, ಶಾಸಕರ ಸಭೆ ನಡೆಸಿ ಅವರ ಮನಸ್ಥಿತಿಯ ಆರೋಗ್ಯ ವರದಿ ಸಿದ್ಧಪಡಿಸುತ್ತಿದ್ದಾರೆ ಎಂದು ದೂರಿದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆ. ಖಾಸಗಿ ಕಾರ್ಯಕ್ರಮವನ್ನು ಸರ್ಕಾರದ ಕಾರ್ಯಕ್ರಮ ಎಂಬಂತೆ ಬಿಂಬಿಸಲಾಗುತ್ತಿದೆ. ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ. ಬಿಹಾರದಲ್ಲಿ ನಡೆಯುವ ಚುನಾವಣೆಯಲ್ಲಿ ಓಬಿಸಿ ಟ್ರಂಪ್ ಕಾರ್ಡ್‌ನ್ನು ಬಳಸಲು ಸಿದ್ದರಾಮಯ್ಯ ಅವರನ್ನು ಓಬಿಸಿ ನಾಯಕರನ್ನಾಗಿ ಬಿಂಬಿಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ಬಿಹಾರ ಚುನಾವಣೆ ಬಳಿಕ ಒಬಿಸಿ ಸ್ಥಾನವೂ ಇರಲ್ಲ, ಸಿಎಂ ಸ್ಥಾನವೂ ಸಹ ಇರಲ್ಲ. ಸಿದ್ದರಾಮಯ್ಯ ಹರಕೆಯ ಕುರಿಯಾಗಲಿದ್ದಾರೆ ಎಂದರು.ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ವೇತನ ಸಿಗುತ್ತಿಲ್ಲ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಬಳ್ಳಾರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಅನೇಕ ಭಾಗಗಳಲ್ಲಿ ಡ್ರಗ್ಸ್ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇಸ್ಪೀಟ್, ಮಟ್ಕಾ ಸೇರಿದಂತೆ ಜೂಜಾಟಗಳು ಹೆಚ್ಚಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆ ಸಂಪೂರ್ಣ ನಿಶಬ್ಧವಾಗಿದೆ. ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹ 40ಕೋಟಿ ಅನುದಾನ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ವಿಜಯನಗರ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಮಕ್ಕಳು, ರೋಗಿಗಳು ಪರದಾಟ ನಡೆಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಈ ಬಗ್ಗೆ ಗಮನ ಹರಿಸಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದಾರೆ. ತುಂಗಭದ್ರಾ ಜಲಾಶಯದ 19ನೇ ಗೇಟ್ ಅಳವಡಿಕೆ ವಿಳಂಬದಿಂದ ಈ ಭಾಗದ ರೈತರು ಒಂದು ಬೆಳೆಯ ನೀರಿನಿಂದ ವಂಚಿತರಾಗುವಂತಾಗಿದೆ. ರೈತರ ಜೀವನ ಜತೆ ಸರ್ಕಾರ ಚೆಲ್ಲಾಟ ಆಡಲಾಗುತ್ತಿದೆ. ಎಚ್‌ಎಲ್‌ಸಿ, ರಾಯ ಬಸವ ಕಾಲುವೆ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ವಿಜಯನಗರದಲ್ಲಿ 56 ಎಕರೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅಂದಿನ ಸಚಿವ ಆನಂದ್ ಸಿಂಗ್ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಈವರೆಗೂ ಸ್ಥಾಪನೆಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.