ರೈತರ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕಾಂಗ್ರೆಸ್‌ ಸರ್ಕಾರ: ಶ್ರೀರಾಮುಲು

KannadaprabhaNewsNetwork |  
Published : Aug 02, 2024, 12:47 AM IST
ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದಲ್ಲಿನ ತುಂಗಭದ್ರ ನದಿ ದಡಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು,ಮುಖ್ಯಸಚೇತಕ ಕೆ.ದೊಡ್ಡನಗೌಡ ಗುರುವಾರ ಸಂಜೆ ಭೇಟಿ ನೀಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳಗಿದ್ದು, ರೈತರ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

ಕನ್ನಡಪ್ರಭ ವಾರ್ತೆ ಕಾರಟಗಿ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳಗಿದ್ದು, ರೈತರ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ಭ್ರಷ್ಟಾಚಾರ ತಡೆಯಲು, ಸರ್ಕಾರಕ್ಕೆ ಎಚ್ಚರ ನೀಡಲು ಆ. ೩ಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ತುಂಗಭದ್ರಾ ನದಿ ಪಾತ್ರದಲ್ಲಿನ ಹಳ್ಳಿಗಳ ಪ್ರವಾಹಕ್ಕೆ ನಲುಗಿದ ಸ್ಥಿತಿಗತಿ ಅಧ್ಯಯನಕ್ಕೆ ಆಗಮಿಸಿದ್ದ ಅವರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಿನಿಂದ ಮೈಸೂರಿನ ತನಕ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆಯಲ್ಲಿ ಯಾವುದೇ ಭಿನ್ನಮತವಿಲ್ಲದೆ ಎಲ್ಲರೂ ಭಾಗಿಯಾಗುತ್ತಾರೆ. ಬಿಜೆಪಿ ಪಾದಯಾತ್ರೆಯಲ್ಲಿ ನಾನು ಮತ್ತು ನನ್ನ ಸ್ನೇಹಿತ ಶಾಸಕ ಜಿ. ಜನಾರ್ದನ ರೆಡ್ಡಿ ಸೇರಿ ಬಳ್ಳಾರಿ-ಕೊಪ್ಪಳದ ಎಲ್ಲ ನಾಯಕರು ಪಾಲ್ಗೊಳ್ಳುತ್ತೇವೆ. ಕಾಂಗ್ರೆಸ್ ಸರ್ಕಾರದ ಹಗರಣ ಈಗಾಗಲೇ ರಾಜ್ಯಪಾಲರ ಅಂಗಳದಲ್ಲಿದೆ. ಹೀಗಾಗಿ ನಾನು ಈ ಸಂದರ್ಭದಲ್ಲಿ ಮಾತನಾಡುವುದು ತಪ್ಪಾಗುತ್ತದೆ. ಈ ಬಗ್ಗೆ ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇನ್ನೂ ಸಿಎಂ ಸಿದ್ದರಾಮಯ್ಯ ಅವರ ಮುಡಾ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು. ಈ ಪ್ರಕರಣದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಈ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಆದರೆ, ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ತಪ್ಪು ನಡೆದಿದೆ ಎಂದರು.

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾನು ಯಾವುದೇ ಕಾರಣಕ್ಕೂ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು. ರಾಜಕೀಯವಾಗಿ ಓಡಿಹೋಗುವ ಪರಿಸ್ಥಿತಿ ನನಗಿಲ್ಲ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷ ಯಾರಿಗೆ ಸೂಚನೆ ನೀಡುತ್ತದೆಯೋ ಅವರ ಪರ ಕೆಲಸ ಮಾಡುತ್ತೇನೆ ಎಂದಷ್ಟೇ ಹೇಳಿದರು.

ಹಾನಿ ವರದಿ ವಿಜಯೇಂದ್ರಗೆ ಸಲ್ಲಿಕೆ:

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯ ಪ್ರವಾಹದಿಂದ ಆದ ನಷ್ಟದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಆಶೋಕಗೆ ವರದಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲೂಕಿನ ತುಂಗಭದ್ರಾ ನದಿದಂಡೆಯ ಕಕ್ಕರಗೋಳ ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶವನ್ನು ಗುರುವಾರ ಸಂಜೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತುಂಗಭದ್ರಾ ಜಲಾಶಯದಿಂದ ಸುಮಾರ ೨ ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಸಂತ್ರಸ್ತ ಗ್ರಾಮಗಳ ಜನರ ಸಮಸ್ಯೆ ಆಲಿಸಲು ಆಗಮಿಸಿರುವೆ. ರಾಜ್ಯದಲ್ಲಿ ಈಗಾಗಲೇ ಬರ ಮತ್ತು ಮಳೆ ನೆರೆಯಿಂದ ಜನ ಹಾಗೂ ಜಾನುವಾರು ಮತ್ತು ಆಸ್ತಿಗಳು ಹಾನಿಯಾಗಿವೆ. ಎಲ್ಲವನ್ನು ಗಮನಿಸಿ ವರದಿ ಸಿದ್ದಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕಗೆ ಸಲ್ಲಿಸುತ್ತೇನೆ. ಬಿಜೆಪಿ ನಾಯಕರು ರೈತರು ಮತ್ತು ಜನರ ಸಮಸ್ಯೆಗಳನ್ನು ಸದನದಲ್ಲಿ ಮುಖ್ಯಮಂತ್ರಿ ಗಮನಕ್ಕೆ ತರುತ್ತಾರೆ ಎಂದರು.

ಉಳೇನೂರು, ಬೆನ್ನೂರು, ನಂದಿಹಳ್ಳಿ ಗ್ರಾಮಗಳಲ್ಲಿ ಭೇಟಿ ಕೊಟ್ಟ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.

ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕ ಜಿ. ಜನಾರ್ದನರೆಡ್ಡಿ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಡಾ. ಬಸವರಾಜ ಕ್ಯಾವಟರ್, ವಿರುಪಾಕ್ಷಪ್ಪ ಸಿಂಗನಾಳ, ಭಾವಿ ಶರಣಪ್ಪ, ರಮೇಶ್ ನಾಯಕ, ಮಾರೆಪ್ಪ ಮೋತಿ ಮಂಜುನಾಥ ಮಸ್ಕಿ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ