ಯಲಬುರ್ಗಾ : ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತ ಮೆಚ್ಚಿಕೊಂಡು ದೇಶಾದ್ಯಂತ ಜನತೆ ಬಿಜೆಪಿ ಪರ ಒಲವು ಹೊಂದಿರುವುದನ್ನು ಕಂಡು ಕಾಂಗ್ರೆಸ್ಸಿನವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ತಾಳಕೇರಿ, ಗಾಣದಾಳ, ಬೋದೋರ, ಮಾಟಲದಿನ್ನಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬುಧುವಾರ ತಾಲೂಕಾ ಬಿಜೆಪಿ ವತಿಯಿಂದ ಕೊಪ್ಪಳ ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ ಆಯೋಜಿಸಿದ್ದ ಗ್ರಾಪಂ ವ್ಯಾಪ್ತಿಯ ಬಹಿರಂಗ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ ಜನರ ಸುರಕ್ಷತೆಗಾಗಿ ಮತ್ತೊಮ್ಮೆ ಮೋದಿಯವರ ನೇತೃತ್ವದ ಸರ್ಕಾರವನ್ನು ಕೇಂದ್ರದಲ್ಲಿ ತರಬೇಕೆನ್ನುವ ಮಹಾದಾಸೆ ದೇಶದ ಜನತೆಯಲ್ಲಿದೆ ಎಂದರು.
ಕಾಂಗ್ರೆಸ್‌ನವರು ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರ ನಡೆಸುವವರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶ ಮತ್ತಷ್ಟು ಸಮಗ್ರ ಅಭಿವೃದ್ದಿ ಹೊಂದಬೇಕೆನ್ನುವ ಕನಸನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಮೋದಿಯವರನ್ನು ಮತ್ತೋಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕು ಎಂದು ದೇಶದ ಜನತೆ ತಿರ್ಮಾನಿಸಿದ್ದಾರೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದರಿಂದ ಕಾಂಗ್ರೆಸ್‌ನವರಿಗೆ ಫಲಿತಾಂಶದ ಮುನ್ನವೇ ನಡುಕ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಒಬ್ಬ ಸಜ್ಜನ ಕುಟುಂಬದಿಂದ ಬಂದ ಯುವ ರಾಜಕಾರಣಿಯಾಗಿದ್ದು, ಇವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಜಿಪಂ ಮಾಜಿ ಸದಸ್ಯ ಸಿ.ಎಚ್. ಪಾಟೀಲ್, ರತನ್ ದೇಸಾಯಿ, ಮಲ್ಲಿಕಾರ್ಜುನ ಹರ್ಲಾಪೂರ, ಬಸವರಾಜ ಗೌರಾ, ಶಂಕ್ರಪ್ಪ ಸುರಪುರ, ಗಾಳೆಪ್ಪ ಓಜನಹಳ್ಳಿ, ಅಯ್ಯಪ್ಪ ಗುಳೆ, ಫಕೀರಪ್ಪ ತಳವಾರ, ಶರಣಪ್ಪ ಹೊಸಕೇರಿ, ಶರಣಪ್ಪ ಗೌಡ್ರ, ಶಿವಪ್ಪ ವಾದಿ, ಶೇಕರಗೌಡ ರಾಮತಾಳ, ಸೋಮನಗೌಡ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.