- ನಡಾವಳಿ ರದ್ದು ಪಡಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹ । ಸಿಂಗಲ್ ಟೆಂಡರ್ ಕರೆದು ಆಪ್ತರಿಗೆ ಕಾಮಗಾರಿ ನೀಡುವ ಹುನ್ನಾರ । ಬಿಜೆಪಿ- ಜೆಡಿಎಸ್ ಸದಸ್ಯರ ಜಂಟಿ ಸುದ್ಧಿಗೋಷ್ಠಿ
ಈ ಹಿಂದೆ ಬಿಜೆಪಿಯಿಂದ ನಗರಸಭೆ ಅಧ್ಯಕ್ಷರಾಗಿದ್ದ ವರಸಿದ್ದಿ ವೇಣುಗೋಪಾಲ್ ಅವರು ದಾರಿ ತಪ್ಪಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ನಗರಸಭೆ ಸದಸ್ಯರು ಅಧ್ಯಕ್ಷರಿಂದ ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ನಗರಸಭೆ ಸದಸ್ಯ ಟಿ.ರಾಜಶೇಖರ್ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷರು ಕಾಂಗ್ರೆಸ್ ಮತ್ತು ಶಾಸಕರ ಕೈಗೊಂಬೆ ಯಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲ 52 ವಿಷಯಗಳು ಚರ್ಚೆಗೆ ಬರುವ ಮುನ್ನವೇ 4 ತಿಂಗಳ ಲೆಕ್ಕಪತ್ರಕ್ಕೆ ಒಮ್ಮಲೇ ಅನುಮೋದನೆ ಪಡೆದು ಅಧ್ಯಕ್ಷರು, ಶಾಸಕರು ಮತ್ತು ಕಾಂಗ್ರೆಸ್ ಸದಸ್ಯರು ಪಲಾಯನ ಮಾಡಿದರು ಎಂದು ದೂರಿದರು.ಇದು ಕಾನೂನು ಬಾಹಿರ. ಇದಕ್ಕೆ ಶಾಸಕರ ಕುಮ್ಮಕ್ಕಿದೆ. ಅನುಮೋದನೆ ಸಿಕ್ಕಿದೆ ಎಂದು ಮುಂದಿನ 4 ತಿಂಗಳು ಯಾವುದೇ ಸಭೆ ನಡೆಸದೆ ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಹಣದಿಂದ ಕಾಂಗ್ರೆಸ್ ಸದಸ್ಯರಿಗೆ ಕಿಕ್ ಬ್ಯಾಕ್ ದೊರೆಯುವ ಸಂಶಯವಿದೆ. ಹೀಗಾಗಿ ಸಭೆಯಲ್ಲಿ ಕೈಗೊಂಡಿರುವ ನಡಾವಳಿಯನ್ನು ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿ ಆಗ್ರಹಿಸುವುದಾಗಿ ತಿಳಿಸಿದರು.
ಇದೂ ಕೂಡ ಕಾನೂನು ಬಾಹಿರ. ಫ್ಲೆಕ್ಸ್, ಶಾಮಿಯಾನ, ಲೈಟಿಂಗ್ಸ್ ಮತ್ತು ಊಟದ ಲೆಕ್ಕದಲ್ಲಿ ದುಂದು ವೆಚ್ಚ ಮಾಡಿ ದ್ದಾರೆ. ಸಿಂಗಲ್ ಟೆಂಡರ್ ಕರೆಯಲು ಅವಕಾಶ ಇಲ್ಲದಿದ್ದರೂ ಒಮ್ಮೆ ಟೆಂಡರ್ ಕರೆದು ಆಪ್ತ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ. ಈ ಎಲ್ಲ ಅವ್ಯವಹಾರಗಳ ಬಗ್ಗೆ ನಗರಾಭಿವೃದ್ಧಿ ಕಾರ್ಯದರ್ಶಿ, ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಲಿದ್ದೇವೆ ಎಂದು ಹೇಳಿದರು.
ಶಾಸಕರು ಕಾಯ್ದೆ ಉಲ್ಲಂಘಿಸಿ ಅಂದು ಕೈ ಎತ್ತುವ ಮೂಲಕ ಅನುಮೋದನೆ ದೊರೆತಿದೆ ಎಂದು ಸಭೆಯಿಂದ ಹೊರ ನಡೆಯುವಂತೆ ಸನ್ನೆ ಮಾಡಿರುವುದು ಖಂಡನೀಯ ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಟಿ. ರಾಜಶೇಖರ್ ಮಾತನಾಡಿದರು.