ಕನ್ನಡಪ್ರಭ ವಾರ್ತೆ ಪಾವಗಡ ಗ್ರಾಮಸ್ಥರು ಹಾಗೂ ಹಿರಿಯ ಮುಖಂಡರ ಸಮ್ಮುಖದಲ್ಲಿ ತಾಲೂಕಿನ ನಿಡಗಲ್ಲು ಹೋಬಳಿಯ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ .ಅಂಬೇಡ್ಕರ ಅವರ ನೂತನ ಪ್ರತಿಮೆ ಅನಾವರಣ ಹಾಗೂ ಬಾಬು ಜಗಜೀವನ್ ರಾಮ್ ಜಯಂತ್ಯುತ್ಸವ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು. ಪ್ರತಿಮೆ ಅನಾವರಣಗೊಳಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನಿಡಗಲ್ಲು ಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ನಂದ ಸ್ವಾಮೀಜಿ, ಡಾ. ಬಿ.ಆರ್ ಅಂಬೇಡ್ಕರ ಅವರು ಬರೆದಿರುವ ಸಂವಿಧಾನ ಈ ದೇಶದಲ್ಲಿ ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತದೆ. ಶೋಷಿತ ಸಮುದಾಯದ ಬಂಧುಗಳು ಸಂವಿಧಾನದ ಸೌಲಭ್ಯವನ್ನು ಪಡೆದು ಸಮಾಜಮುಖಿಗಳಾಗಿ ಬಾಳಬೇಕು. ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ ಅವರು ಸಮಾರಂಭದ ಅಧ್ಯಕ್ಷತೆ ಮಹಿಸಿ ಮಾತನಾಡಿ,ಡಾ. ಬಿ.ಆರ್.ಅಂಬೇಡ್ಕರ ಅವರು ಬರೆದ ಸಂವಿಧಾನದಿಂದ ನಾವೆಲ್ಲರೂ ಮೀಸಲಾತಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಿದೆ. ಸಂವಿಧಾನದ ಅನ್ವಯ ವಿವಿಧ ಹುದ್ದೆಯ ಸೌಲಭ್ಯಗಳನ್ನು ಪಡೆದಿದ್ದೇವೆ. ಅಂಬೇಡ್ಕರ ಹಾಗೂ ಬಾಬು ಹಸಿರು ಕ್ರಾಂತಿ ಹರಿಕಾರರಾದ ಬಾಬು ಜಗಜೀವನ ರಾಮ್ ಅವರ ಜನಪರ ಕೊಡುಗೆಗಳನ್ನು ಸ್ಮರಿಸಿ, ಮೀಸಲಾತಿಯಿಂದ ತಮಗೆ ಶಾಸಕರ ಅಧಿಕಾರ ಸಿಕ್ಕಿದ್ದ ವೇಳೆ ತಾಲೂಕಿನ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿಗೆ ಹೆಚ್ಚು ನೀಡಿದ ವಿಚಾರ ನಿಮಗೆಲ್ಲ ಗೊತ್ತಿದೆ. ವಿದ್ಯೆಯಿಂದ ಪ್ರಗತಿ ಸಾಧ್ಯ. ವಿದ್ಯೆಯೇ ನಮಗೆ ಸುಭದ್ರ ಅಸ್ತ್ರ. ಎಲ್ಲ ಶೋಷಿತ ಸಮುದಾಯದ ಬಂಧುಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ,ಉತ್ತಮ ಶಿಕ್ಷಣವಂತರನ್ನಾಗಿ ರೂಪಿಸುವಂತೆ ಸಲಹೆ ನೀಡಿದರು.
ಮಾಜಿ ಜಿಪಂ ಸದಸ್ಯರಾದ ಕೆಂಚಮಾರಯ್ಯ, ಸ್ಥಳೀಯ ಮುಖಂಡರಾದ ರಂಗೇಗೌಡ, ಡಿ.ದಾಸಪ್ಪ, ಕೋರ್ಟ್ ನರಸಪ್ಪ, ಎಸ್.ಹನುಮಂತರಾಯಪ್ಪ ಹಾಗೂ ಮಾಜಿ ಜಿಪಂ ಉಪಾಧ್ಯಕ್ಷರಾದ ಎಂ.ಕೆ.ನಾರಾಯಣಪ್ಪ, ಕೋಡಿಗೇನಹಳ್ಳಿ ನರಸಿಂಹಪ್ಪ, ಪಾವಗಡ ಶ್ರೀರಾಮ್, ಪಾಳೇಗಾರ್ ಲೋಕೇಶ್, ಮದಾರ್ ಮಹಾ ಸಭಾದ ಅವಿನಾಶ್. ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಕೆ. ತಿಪ್ಪೇಸ್ವಾಮಿ,ಕೆ .ಎಲ್. ಚಂದ್ರಣ್ಣ,ರಾಮಾಂಜನೇಯ,ಪಿಡಿಒ ಮಂಜುನಾಥ್. ವಕೀಲರಾದ ಟಿ.ಎನ್ .ಪೇಟೆ ರಮೇಶ್,ಕೆ.ಪಿ.ಲಿಂಗಣ್ಣ ಜೈವಿಕ ಹನುಮಂತರಾಯ,ಅಂಜಪ್ಪ. ಮಂಜುನಾಥ್,ಶಿವಲಿಂಗಪ್ಪ ಇತರರಿದ್ದರು.