ಸಂವಿಧಾನವೇ ನಮ್ಮ ದೇಶದ ಭದ್ರ ಬುನಾದಿ

KannadaprabhaNewsNetwork |  
Published : Dec 05, 2025, 01:00 AM IST
ಬಳ್ಳಾರಿಯ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ ಅವರು ಉದ್ಘಾಟಿಸಿದರು.  | Kannada Prabha

ಸಾರಾಂಶ

ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು.

ಬಳ್ಳಾರಿ: ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಪ್ರಜಾಪ್ರಭುತ್ವ, ವ್ಯಕ್ತಿ ಗೌರವ ಸೇರಿದಂತೆ ಎಲ್ಲ ಅಂಶಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಅಳವಡಿಸಲಾಗಿದೆ. ಇದೇ ನಮ್ಮ ದೇಶದ ಭದ್ರ ಬುನಾದಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕೆ.ಜಿ.ಶಾಂತಿ ಹೇಳಿದರು.

ವೀರಶೈವ ವಿದ್ಯಾವರ್ಧಕ ಸಂಸ್ಥೆ, ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ನಗರದ ನಗರದ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. 1949 ರ ನವೆಂಬರ್ 26 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಇದರ ನೆನಪಿಗಾಗಿ ಅಂಗೀಕಾರದ ದಿನವನ್ನು ಸ್ಮರಿಸಲು ಸಂವಿಧಾನ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಭಾರತ ಸರ್ಕಾರವು 2015ರಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಮತ್ತು ಕಾನೂನು ದಿನಾಚರಣೆ ಎಂದು ಸಹ ಆಚರಿಸಲು ನಿರ್ದೇಶನ ನೀಡಿತು. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಲು ಸಂವಿಧಾನ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

ನಮ್ಮ ಸಂವಿಧಾನ ವಿಶ್ವದಲ್ಲೇ ಅತಿದೊಡ್ಡ ಲಿಖಿತ ರೂಪದಲ್ಲಿದ್ದು, ದೇಶದಲ್ಲಿ ಯಾವುದೇ ಕಾಯ್ದೆ-ಕಾನೂನುಗಳನ್ನೂ ರೂಪಿಸಬೇಕಾದರೆ ಅದರ ಭದ್ರ ಬುನಾದಿಯಾಗಿ ಸಂವಿಧಾನ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ಆಡಳಿತ, ಸರ್ಕಾರದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು, ಎಲ್ಲ ಕಾಯ್ದೆಗಳು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಲು ಸಂವಿಧಾನ ಮಾರ್ಗದರ್ಶನ ಮಾಡುತ್ತದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಕೆ.ಜಿ.ಶಾಂತಿ ತಿಳಿಸಿದರು.

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಮರೆಯಬಾರದು. ನಮ್ಮ ಸಂವಿಧಾನದಂತೆ ನೇಪಾಳ ಮತ್ತು ಪಾಕಿಸ್ತಾನ ದೇಶಗಳ ಸಂವಿಧಾನವೂ ರಚನೆಯಾಯಿತು. ಅಲ್ಲಿ ಸಂವಿಧಾನಗಳೇ ಬದಲಾವಣೆಗಳಾದವು. ಆದರೆ ನಮ್ಮ ಸಂವಿಧಾನದಲ್ಲಿ ಕೇವಲ ತಿದ್ದುಪಡಿ ಮಾಡಲಾಯಿತು ಎಂದರು.

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಹಲವು ಜಾತಿ-ಧರ್ಮ, ಭಾಷೆ, ವಿವಿಧ ಸಂಸ್ಕೃತಿ ಒಳಗೊಂಡಿದ್ದು, ಸಂವಿಧಾನದ ಪೂರಕವಾಗಿ ಜೀವನ ಮಾಡಿದರೆ ಉತ್ತಮ ಪ್ರಜೆಯಾಗಲು ಸಾಧ್ಯ. ಸಂವಿಧಾನ ವಿರುದ್ಧವಾಗಿ ನಡೆದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನದಲ್ಲಾದ ಹಲವು ತಿದ್ದುಪಡಿಗಳನ್ನು ಈಗಿನ ವಕೀಲರೂ ಪರಿಪೂರ್ಣವಾಗಿ ಅರ್ಥೈಸಿಕೊಳ್ಳುವ ಮೂಲಕ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ ಭೋದಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜಿನ ಅಧ್ಯಕ್ಷ ಟಿ.ನರೇಂದ್ರ ಬಾಬು, ಸದಸ್ಯರಾದ ಚಂದ್ರಶೇಖರ್, ಉಡೇದ ಪ್ರಭುದೇವ, ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ರಜನಿ ಕುಮಾರಿ ಸೇರಿದಂತೆ ಕಾಲೇಜಿನ ಆಡಳಿತ ಸಿಬ್ಬಂದಿ, ಬೋಧಕ -ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೌಕಾ ದಿನಾಚರಣೆಯಲ್ಲಿ ರಾಜ್ಯಪಾಲರು ಭಾಗಿ
ಡಿಸೆಂಬರ್‌ 10ರಿಂದ ಹುಕ್ಕೇರಿಮಠದ ಶ್ರೀಗಳಿಂದ ಹಾವೇರಿಯಲ್ಲಿ ಜನಜಾಗೃತಿ ಪಾದಯಾತ್ರೆ