ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಅಗತ್ಯವಿರುವ 318 ಬೋಗಿಗಳ ನಿರ್ಮಾಣಕ್ಕೆ ಚಾಲನೆ : ಚಾಲಕ ರಹಿತ ಸಂಚಾರ

KannadaprabhaNewsNetwork |  
Published : Sep 01, 2024, 01:54 AM ISTUpdated : Sep 01, 2024, 07:46 AM IST
metro | Kannada Prabha

ಸಾರಾಂಶ

ಬೆಂಗಳೂರಿನ ಮೆಟ್ರೋದ ಗುಲಾಬಿ ಮತ್ತು ನೀಲಿ ಮಾರ್ಗಗಳಿಗೆ ಬೇಕಾದ 318 ಚಾಲಕ ರಹಿತ ಬೋಗಿಗಳ ನಿರ್ಮಾಣ ಕಾರ್ಯಕ್ಕೆ ಶನಿವಾರ ಚಾಲನೆ ದೊರೆತಿದೆ. ಈ ಬೋಗಿಗಳನ್ನು ಬಿಇಎಂಎಲ್ ಒದಗಿಸಲಿದ್ದು, 2023 ರ ಒಪ್ಪಂದದಂತೆ 73 ಕಿಮೀ ಮಾರ್ಗದಲ್ಲಿ ಸಂಚರಿಸಲಿವೆ.

 ಬೆಂಗಳೂರು :  ನಮ್ಮ ಮೆಟ್ರೋದ ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಅಗತ್ಯವಿರುವ 318 ಬೋಗಿಗಳ ನಿರ್ಮಾಣಕ್ಕೆ ಶನಿವಾರ ಚಾಲನೆ ದೊರೆತಿದೆ. ಚಾಲಕ ರಹಿತ ರೈಲುಗಳು ಈ ಮಾರ್ಗದಲ್ಲಿ ಓಡಾಡಲಿವೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್, ಬಿಇಎಂಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಂತನು ರಾಯ್, ಚಾಲಕ ರಹಿತ ಮೆಟ್ರೋ ಮೂಲ ಮಾದರಿ ತಯಾರಿಕೆ ಚಾಲನೆ ನೀಡಿದರು.

2023ರಲ್ಲಿ ಆದ ಒಪ್ಪಂದದಂತೆ ಹೊರವರ್ತುಲ ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ನೀಲಿ ಮಾರ್ಗ) ಮತ್ತು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ (ಗುಲಾಬಿ ಮಾರ್ಗ) ಒಟ್ಟು 73 ಕಿಮೀ ಮಾರ್ಗಕ್ಕೆ ಬೋಗಿಗಳನ್ನು ಬಿಇಎಂಎಲ್ ಒದಗಿಸಲಿದೆ.

ಬೋಗಿಗಳ ಪೂರೈಕೆಗೆ ಸಂಬಂಧಿಸಿ ಬಿಇಎಂಎಲ್, ಅಲ್‌ಸ್ಟೋಮ್ ಟ್ರಾನ್ಸ್‌ಪೋರ್ಟ್ ಇಂಡಿಯಾ, ತಿತಾಘರ್ ವ್ಯಾಗನ್ಸ್ ಮತ್ತು ಸಿಎಎಫ್ ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ₹ 3,177 ಕೋಟಿ ಮೊತ್ತಕ್ಕೆ ಬಿಇಎಂಎಲ್ ಟೆಂಡರ್ ಪಡೆದಿತ್ತು. 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೊ ಕಾರುಗಳ ವಿನ್ಯಾಸ, ತಯಾರಿಕೆ, ಪೂರೈಕೆ, ಪರೀಕ್ಷೆ, ಕಾರ್ಯಾರಂಭ ಹಾಗೂ 15 ವರ್ಷಗಳವರೆಗೆ ಸಮಗ್ರ ನಿರ್ವಹಣೆ ಹಾಗೂ ಸಿಬ್ಬಂದಿ ತರಬೇತಿ ನೀಡುವ ಕುರಿತು ಬಿಇಎಂಎಲ್‌ಗೆ ಷರತ್ತು ವಿಧಿಸಲಾಗಿದೆ.

ಚಾಲಕರಹಿತ ಸಂಚಾರ!

318 ಬೋಗಿಗಳ ಪೈಕಿ ಆರು ಬೋಗಿ ಮಾದರಿಯ 16 ರೈಲುಗಳು ಗುಲಾಬಿ ಮಾರ್ಗಕ್ಕೆ, 16 ರೈಲುಗಳು ಕೇಂದ್ರ ರೇಷ್ಮೆ ಮಂಡಳಿಯಿಂದ- ಕೆಆರ್ ಪುರದವರೆಗೆ ಹಾಗೂ 21 ರೈಲುಗಳನ್ನು ಕೆಆರ್ ಪುರ- ವಿಮಾನ ನಿಲ್ದಾಣ ಮಾರ್ಗಕ್ಕೆ ನಿಯೋಜನೆ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ರೈಲುಗಳನ್ನು ಅತ್ಯುತ್ತಮ ದರ್ಜೆಯ ಸ್ಟೀಲ್ ಬಳಸಿ ನಿರ್ಮಿಸಲಾಗುತ್ತಿದೆ. ಪ್ರತಿ ಬೋಗಿಯಲ್ಲೂ ಪರಿಣಾಮಕಾರಿ ಹವಾನಿಯಂತ್ರಣ ಒದಗಿಸಲು ಎರಡು ರೂಫ್-ಮೌಂಟೆಡ್ ಸಲೂನ್ ಏರ್ ಕಂಡಿಷನರ್‌ ಅಳವಡಿಸಲಾಗುತ್ತಿದೆ. ರೈಲು ಸಂಚಾರದ ನೈಜ-ಸಮಯ ಒದಗಿಸಲು ಪ್ರಯಾಣಿಕರ ಸಲೂನ್ ಕಣ್ಗಾವಲು ವ್ಯವಸ್ಥೆ, ಜೊತೆಗೆ ಐಪಿ-ಆಧಾರಿತ ಪ್ಯಾಸೆಂಜರ್ ಅನೌನ್ಸ್‌ಮೆಂಟ್ (ಪಿಎ) ಮತ್ತು ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆ (ಪಿಐಎಸ್) ಇರಲಿದೆ. ಲಗೇಜ್‌ ರ್ಯಾಕ್‌ನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಸುಧಾರಿತ ಅಗ್ನಿ ಸುರಕ್ಷತೆ ವ್ಯವಸ್ಥೆ ಇರಲಿದ್ದು, ಹಳಿ ತಪ್ಪಿದ ಪತ್ತೆ ವಿಧಾನ ಹಾಗೂ ಪ್ಯಾಸೆಂಜರ್ ಅಲಾರ್ಮ್ ಡಿವೈಸ್ (ಪಿಎಡಿ) ಹೊಂದಿರಲಿದೆ. ಸಿಬಿಟಿಸಿ-ಆಧಾರಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಈ ರೈಲು ಸಂಚರಿಸಲಿದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ