ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಾಲೂಕಿನ ಬಿಲ್ ಕೆರೂರ ಗ್ರಾಮದಲ್ಲಿ ನಡೆದ ಬಿಲ್ವಾಶ್ರಮ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ 44ನೇ ಪುಣ್ಯಾರಾಧನೆ, ಪೀಠಾಧಿಪತಿ ಸಿದ್ಧಲಿಂಗ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ, ಗುರು ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಡಿನ ಸಮಸ್ತ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಜೀವನಮಟ್ಟ ಸುಧಾರಿಸಿದ್ದರೆ ಅದು ಮಠಮಾನ್ಯಗಳ ಶ್ರಮದಿಂದ. ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿದ ಮಠಗಳು ಕೇವಲ ಧಾರ್ಮಿಕ ಭಾವನೆಯನ್ನು ಜನರಲ್ಲಿ ಬಿತ್ತಲಿಲ್ಲ. ಅಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ, ಪರಂಪರೆ ಯನ್ನು ತಿಳಿಸಿ ಸನ್ಮಾರ್ಗದಲ್ಲಿ ನಡೆಸಿವೆ ಎಂದ ಅವರು, ಶಿಕ್ಷಣ ಸಂಸ್ಥೆ, ಪ್ರಸಾದ ನಿಲಯಗಳ ಮೂಲಕ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ಹಾಗೂ ಅರಿವು ನೀಡಿ ನಾಡಿಗೆ ಮಹತ್ತರ ಕೊಡುಗೆ ನೀಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೂತನ ದಂಪತಿಗಳಿಗೆ ಶುಭ ಹಾರೈಸಿ ಮಾತನಾಡಿ, ಗ್ರಹಸ್ಥ ಬದುಕು ಸುಂದರವಾಗಬೇಕಾದರೆ ಅತ್ತೆ-ಸೊಸೆಯ ನಡುವೆ ತಾಯಿ-ಮಗಳ ಬಾಂಧವ್ಯ ಬೆಳೆಯಬೇಕು. ಇವರಿಬ್ಬರ ಅನ್ಯೋನ್ಯದ ಸಂಬಂಧ ಭೂಲೋಕದ ಸ್ವರ್ಗ ಎಂದೆನಿಸುತ್ತದೆ ಎಂದು ಹೇಳಿ, ರಾಷ್ಟ್ರಭಕ್ತಿ, ಗುರುಭಕ್ತಿ ಯುಳ್ಳ ಮಕ್ಕಳಿಗೆ ಜನ್ಮ ನೀಡಿ ಬಂಗಾರದ ಬದುಕು ಕಾಣಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಮೌನತಪಸ್ವಿ ಲಿಂ.ರುದ್ರಮುನಿ ಶಿವಾಚಾರ್ಯರು ಜನರ ಕಲ್ಯಾಣ ಬಯಸಿದವರು. ಅವರ ಭಕ್ತಿಯ ಪರಂಪರೆಯಿಂದಾಗಿ ಶ್ರೀಮಠ ಇಂದು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಅವರ ತಪಸ್ಸಿನ ಫಲದಿಂದಾಗಿ ಬಿಲ್ ಕೆರೂರ ಕ್ಷೇತ್ರ ಪಾವನ ಕ್ಷೇತ್ರವಾಗಿ ಬೆಳೆದಿದೆ ಎಂದರು.ಹುನಗುಂದ ಶಾಸಕ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಹಾದಿ ತಪ್ಪಿಸುವ ಕಾರ್ಯ ನಡೆಸಿವೆ. ಇದನ್ನು ನಿಯಂತ್ರಿಸಿ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಶಕ್ತಿ ಪಂಚಪೀಠಗಳಿಗಿದೆ ಎಂದು ಹೇಳಿದರು.
ಭಕ್ತರ ಸಹಾಯ, ಸಹಕಾರ, ದಾನಿಗಳ ಕೊಡುಗೆ, ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಲ್ವಾಶ್ರಮ ಹಿರೇಮಠದ ಪೀಠಾಧಿಪತಿ ಸಿದ್ಧಲಿಂಗ ಶಿವಾಚಾರ್ಯರು, ಪೂಜ್ಯ ರುದ್ರಮುನಿ ಶಿವಾಚಾರ್ಯರ ಸತ್ಸಸಂಕಲ್ಪದಂತೆ ಈ ವರ್ಷ ನೂತನ ರಥ ನಿರ್ಮಾಣ ಮಾಡಲಾಗಿದೆ. ಬರುವ ದಿನಗಳಲ್ಲಿ ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕೆನ್ನುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಿವಗಂಗೆಯ ವಲಯ ಶಾಂತಮುನಿ ಶಿವಾಚಾರ್ಯರು ಮಾತನಾಡಿದರು. ನಿಡಗುಂದಿ, ಮುತ್ತತ್ತಿ, ಬಾಗೇವಾಡಿ, ಬೀಳಗಿ, ಶಿವಗಂಗೆಯ ಶ್ರೀಗಳು, ಜಿಪಂ ಮಾಜಿ ಅಧ್ಯಕ್ಷರಾದ ಬಸವಂತಪ್ಪ ಮೇಟಿ, ಬಾಯಕ್ಕ ಮೇಟಿ, ಎಸ್.ಎನ್.ರಾಂಪುರ, ಶಂಭುಗೌಡ ಪಾಟೀಲ, ಪ್ರಭು ಡೇರೇದ ಮತ್ತಿತರರು ವೇದಿಕೆಯಲ್ಲಿದ್ದರು.
ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಸ್ವಾಗತಿಸಿದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಲೂತಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಿದ್ಧಲಿಂಗ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಜರುಗಿತು.