ದೇಶದ ಪ್ರಗತಿಗೆ ಸ್ವ-ಸಹಾಯ ಗುಂಪುಗಳ ಕೊಡುಗೆ ಅಮೂಲ್ಯ

KannadaprabhaNewsNetwork |  
Published : Oct 17, 2024, 01:38 AM IST
ಸ್ವ-ಸಹಾಯ ಸಂಘದ ಸದಸ್ಯರಿಗೆ ಬೃಹತ್ ಕೃಷಿಕರಿಗೆ ಮತ್ತು ಸಣ್ಣ ಉದ್ದಿಮೆದಾರರಿಗೆ ಸಾಲ ವಿತರಣೆ ಹಾಗೂ ಆರ್ಥಿಕ ಸಾಕ್ಷರತೆಯ ಅರಿವು,ನಗದು ರಹಿತ ವ್ಯವಹಾರದ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಅರ್ಹರಿಗೆ ಸಾಲದ ಚೆಕ್ ವಿತರಿಸಲಾಯಿತು. | Kannada Prabha

ಸಾರಾಂಶ

ದೇಶದ ಅಭಿವೃದ್ಧಿಗೆ ಸ್ವ-ಸಹಾಯ ಗುಂಪುಗಳ ಕೊಡುಗೆ ಅಮೂಲ್ಯವಾಗಿದ್ದು, ಉಳಿತಾಯ ಮತ್ತು ನಿಯಮಬದ್ಧತೆಯ ವ್ಯವಹಾರದಿಂದ ಮಹಿಳಾ ಸ್ವ-ಸಹಾಯ ಗುಂಪುಗಳು ಅಭಿವೃದ್ದಿಗೆ ಮುನ್ನಡಿಯಾಗಿವೆ ಎಂದು ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಸಹಾಯಕ ಮಹಾ ವ್ಯವಸ್ಥಾಪಕ ಸರವಣ್ಣನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ದೇಶದ ಅಭಿವೃದ್ಧಿಗೆ ಸ್ವ-ಸಹಾಯ ಗುಂಪುಗಳ ಕೊಡುಗೆ ಅಮೂಲ್ಯವಾಗಿದ್ದು, ಉಳಿತಾಯ ಮತ್ತು ನಿಯಮಬದ್ಧತೆಯ ವ್ಯವಹಾರದಿಂದ ಮಹಿಳಾ ಸ್ವ-ಸಹಾಯ ಗುಂಪುಗಳು ಅಭಿವೃದ್ದಿಗೆ ಮುನ್ನಡಿಯಾಗಿವೆ ಎಂದು ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಸಹಾಯಕ ಮಹಾ ವ್ಯವಸ್ಥಾಪಕ ಸರವಣ್ಣನ್ ಮೆಚ್ಚುಗೆ ವ್ಯಕ್ತಪಡಿಸಿದರು.ಶನಿವಾರ ಪಟ್ಟಣದ ಬಸವಾಶ್ರಮದ ಸಮುದಾಯ ಭವನದಲ್ಲಿ ಕೆನರಾ ಬ್ಯಾಂಕ್ ಶಾಖೆ-1 ಮತ್ತು 2, ಸಾಲೂರು, ಕಪ್ಪನಹಳ್ಳಿ, ಶಿರಾಳಕೊಪ್ಪ, ಈಸೂರು ಮತ್ತು ಸ್ಥಳೀಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ, ಬೃಹತ್ ಕೃಷಿಕರಿಗೆ ಮತ್ತು ಸಣ್ಣ ಉದ್ದಿಮೆದಾರರಿಗೆ ಸಾಲ ವಿತರಣೆ ಹಾಗೂ ಆರ್ಥಿಕ ಸಾಕ್ಷರತೆಯ ಅರಿವು, ನಗದು ರಹಿತ ವ್ಯವಹಾರದ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್ ಸಾಲ ವಿತರಿಸುತ್ತಿದ್ದು, ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವ ಮೂಲಕ ಕುಟುಂಬದ ಜತೆಗೆ ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು. ಇದೀಗ ₹3.5 ಕೋಟಿ ಸಾಲ ವಿತರಿಸಲಾಗುತ್ತಿದ್ದು ಸಕಾಲಕ್ಕೆ ಮರುಪಾವತಿಸಿದಲ್ಲಿ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ಅರ್ಹರಾಗುತ್ತೀರಿ ಎಂದು ತಿಳಿಸಿದರು.ಕೆನರಾ ಬ್ಯಾಂಕಿನ ಕ್ಷೇತ್ರಿಯ ಕಚೇರಿಯ ಹಾವೇರಿ ವ್ಯವಸ್ಥಾಪಕ ಸಂಜೀವ್ ಕುಮಾರ್ ಮಾತನಾಡಿ, ಉಳಿತಾಯ ಖಾತೆಯಿಂದ ಘಟಕಕ್ಕೆ ಸಾಲ ಮತ್ತು ಸಾಮಾಜಿಕ ಭದ್ರತೆಯ ವಿಮೆ ಮಾಡಿಸಿದಲ್ಲಿ ಜೀವನದಲ್ಲಿ ಬಡತನ ರೇಖೆಯಿಂದ ಮೇಲೆ ಬರಲು ದಾರಿಯಾಗಲಿದೆ. ಆರ್ಥಿಕ ಅಭಿವೃದ್ಧಿಯೊಂದಿಗೆ ಮುಂದುವರೆಯುತ್ತಿರುವ ಪ್ರಪಂಚದಲ್ಲಿ ನಗದು ರಹಿತ ವ್ಯವಹಾರ ಕೂಡ ಮುಖ್ಯವಾಗಿದ್ದು, ಜಾಗರೂಕತೆಯಿಂದ ನಿರ್ವಹಣೆ ಮಾಡಿ ನೀವು ಅಭಿವೃದ್ಧಿಯಾದಲ್ಲಿ ವಿತರಿಸಿದ ₹3.5 ಕೋಟಿ ಸಾಲದ ಮೌಲ್ಯ ಹೆಚ್ಚಾಗಲಿದೆ ಎಂದು ತಿಳಿಸಿದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಕುಟುಂಬದ ಸುರಕ್ಷತೆಯ ಹಿತದೃಷ್ಠಿಯಿಂದ ಜನರ ಸುರಕ್ಷಾ ಅಭಿಯಾನ ಎಲ್ಲಾ ಬ್ಯಾಂಕುಗಳಲ್ಲಿಯೂ ಜಾರಿಯಲ್ಲಿದೆ. ದುಡಿಯುವ ಜೀವ ಮನೆಯಲ್ಲಿ ಮರಣ ಹೊಂದಿದರೆ ಅವರ ಕುಟುಂಬದ ರಕ್ಷಣೆಗೆ ₹2 ರಿಂದ 4 ಲಕ್ಷ ಪ್ರಧಾನ ಮಂತ್ರಿ ಸುರಕ್ಷ ವಿಮಾ ಯೋಜನೆ ದೊರೆಯುತ್ತದೆ. ಇದಕ್ಕೆ ವರ್ಷಕ್ಕೆ ಕೇವಲ ₹20 ಮಾತ್ರ ವಿನಿಯೋಗಿಸಬೇಕಷ್ಟೇ. ಪಿಎಂ ಜೀವನ ಜ್ಯೋತಿ ವಿಮಾ ಯೋಜನೆ ವರ್ಷಕ್ಕೆ ₹436 ಇದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಗಳಿಂದ ₹4 ಲಕ್ಷದವರೆಗೂ ಪರಿಹಾರ ಪಡೆಯಬಹುದು. ಯುವ ಜನರು ಅಟಲ್ ಪಿಂಚಣಿ ಯೋಜನೆ ಮಾಡಿಸಿದಲ್ಲಿ 60 ವರ್ಷದ ನಂತರ ಐದು ಸಾವಿರ ಪ್ರತಿ ತಿಂಗಳು ಪಡೆಯಬಹುದು. ಪರಿಹಾರದ ಮೊತ್ತ ಕೂಡ ಸಿಗುತ್ತದೆ. ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಬ್ಬರೂ ನಗದು ರಹಿತ ವ್ಯವಹಾರದಲ್ಲಿ ತೊಡಗಿದ್ದಾರೆ. ಆದರೆ ಜಾಗ್ರತೆ ಮತ್ತು ಜಾಣ್ಮೆಯಿಂದ ವ್ಯವಹರಿಸಿದಲ್ಲಿ ಮಾತ್ರ ಯಾವುದೇ ತೊಂದರೆ ಇಲ್ಲ. ಆಮಿಷಕ್ಕೆ ಒಳಪಟ್ಟು ಆಸೆಪಟ್ಟರೆ ಹಣ ಖಾಲಿಯಾಗುತ್ತದೆ. ಹಾಗಾಗಿ ಯಾವುದೇ ಲಿಂಕ್, ಮೆಸೆಜ್ ಬಹುಮಾನಗಳಿಗೆ ಆಸೆಪಡದೆ ವ್ಯವಹರಿಸಿ. ಮೋಸಕ್ಕೆ ಒಳಗಾದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲದ ಪ್ರಬಂಧಕ ಅಶ್ವತ್ ಎಸ್ ವಿ, ಸಣ್ಣ ಉದ್ದಿಮೆದಾರರಿಗೆ, ಸ್ವ-ಸಹಾಯ ಸಂಘದ ಸದಸ್ಯರಿಗೆ, ಬೃಹತ್ ಕೃಷಿಕರಿಗೆ ₹3.5 ಕೋಟಿ ಸಾಲದ ಚೆಕ್ ವಿತರಿಸಿದರು.

ವೇದಿಕೆಯಲ್ಲಿ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆ-1 ಪ್ರಬಂಧಕ ಧರ್ಮದೀಪ್, ಮಂಜಾನಾಯ್ಕ, ಶಾಖೆ-2 ಪ್ರಬಂಧಕ ಶಿವಪ್ರಸಾದ, ಕೃಷಿ ವಿಸ್ತರಣಾ ಆಧಿಕಾರಿ ವಾಮದೇವ್, ಶಿರಾಳಕೊಪ್ಪ ಶಾಖೆಯ ಪ್ರಕಾಶ್, ಕಪ್ಪನಹಳ್ಳಿ ಶಾಖೆಯ ಅರ್ಪಿತ, ಸಾಲೂರು ಶಾಖೆಯ ಹರ್ಷ, ಈಸೂರು ಶಾಖೆಯ ವಿಕಾಸ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ