ಪರಿಸರಕ್ಕೆ ಮಲೆನಾಡಿನ ಕಾಫಿ ಬೆಳೆಗಾರರ ಕೊಡುಗೆ ಅಪಾರ

KannadaprabhaNewsNetwork | Published : Feb 8, 2025 12:30 AM

ಸಾರಾಂಶ

ಭೂಮಿಯಲ್ಲಿ ಉಳುಮೆ ನಡೆಸಿ ಕಾಫಿ ಜೊತೆಯಲ್ಲಿ ಪರಿಸರಕ್ಕೆ ಪೂರಕವಾದ ಗಿಡಮರಗಳನ್ನು ಬೆಳೆಸುವ ಮೂಲಕ ಮಲೆನಾಡು ಕಾಫಿ ಬೆಳೆಗಾರರು ಪರಿಸರಕ್ಕೆ ಅಪಾರ ಪ್ರಮಾಣದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಹೇಳಿದರು. ಕಾಡಾನೆ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನದಲ್ಲಿ ಹೋರಾಟ ನಡೆಸುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಬೆಳೆಗಾರರು ಸಂಘಟನೆಯಾಗಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಭೂಮಿಯಲ್ಲಿ ಉಳುಮೆ ನಡೆಸಿ ಕಾಫಿ ಜೊತೆಯಲ್ಲಿ ಪರಿಸರಕ್ಕೆ ಪೂರಕವಾದ ಗಿಡಮರಗಳನ್ನು ಬೆಳೆಸುವ ಮೂಲಕ ಮಲೆನಾಡು ಕಾಫಿ ಬೆಳೆಗಾರರು ಪರಿಸರಕ್ಕೆ ಅಪಾರ ಪ್ರಮಾಣದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಹೇಳಿದರು.

ತಾಲೂಕಿನ ಹೊಳಲು ಗ್ರಾಮದ ಸಂಘದ ಆವರಣದಲ್ಲಿ ಬಿಕ್ಕೋಡು ಹೋಬಳಿ ಕೆಸಗೋಡು ಭೂಮಿಪುತ್ರ ಬೆಳೆಗಾರರ ಸಂಘದಿಂದ ೧೪ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಅತಿವೃಷ್ಟಿ-ಅನಾವೃಷ್ಟಿಯಿಂದ ಬೇಸತ್ತಿರುವ ಬೆಳೆಗಾರರಿಗೆ ಕಾಡಾನೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್‌ ಮಾತನಾಡಿ, ಅಲೂರು, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಜನರು ಪ್ರಶ್ನೆ ಮಾಡಬೇಕಿದೆ. ಅಲ್ಲದೆ ಹತ್ತಾರು ಬಾರಿ ಹೋರಾಟ, ಧರಣಿ ನಡೆಸಿದರೂ ಕೂಡ ಆನೆಗಳನ್ನು ಓಡಿಸಲು ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ನಾವು ಈಗಾಗಲೇ ಅರಣ್ಯಮಂತ್ರಿಗಳಾದ ಈಶ್ವರ್‌ ಖಂಡ್ರೆರವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಬೇಲೂರು ತಾಲೂಕು ಕಾಫಿಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್‌ ಕುಮಾರ್ ಮಾತನಾಡಿ, ಕಾಫಿ ಬೆಳೆಯನ್ನು ಇತ್ತೀಚಿನ ದಿನದಲ್ಲಿ ದುಬಾರಿ ವೆಚ್ಚದಿಂದಲೇ ಬೆಳೆಯಬೇಕಿದೆ. ಪ್ರಸಕ್ತ ಸಾಲಿನಲ್ಲಿ ಬೆಲೆ ಏರಿಕೆಯಿಂದ ಬೆಳೆಗಾರರಿಗೆ ವರಮಾನ ಬಂದಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ವೆಚ್ಚ ಮಾಡಬೇಕಿದೆ. ಕಾಡಾನೆ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನದಲ್ಲಿ ಹೋರಾಟ ನಡೆಸುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಬೆಳೆಗಾರರು ಸಂಘಟನೆಯಾಗಬೇಕಿದೆ ಎಂದರು.

ಕೆಸಗೋಡು ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ.ರೇಣುಕಾನಂದ ಮಾತನಾಡಿ, ಸಂಘಟನೆಯಿಂದ ಮಾತ್ರ ಸವಲತ್ತು ಮತ್ತು ನ್ಯಾಯ ಪಡೆಯಲು ಸಾಧ್ಯ, ಈ ಹಿನ್ನೆಲೆಯಲ್ಲಿ ಕಳೆದ ೧೩ ವರ್ಷದಿಂದ ಭೂಮಿಪುತ್ರ ಬೆಳೆಗಾರರ ಸಂಘ ರೈತಾಪಿ ವರ್ಗದೊಂದಿಗೆ ಉತ್ತಮ ಕೆಲಸ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಚಟ್ಟನಹಳ್ಳಿ ವೇದರಾಜ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಭೂಮಿಪುತ್ರ ಮಹಿಳಾ ಅಧ್ಯಕ್ಷೆ ಯಶೋಧ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಎಚ್.ಡಿ.ಶಿವಾನಂದ್, ನಫೀಸ್ ಅಹಮದ್, ವೈಶಾಖ್, ಶರತ್ ಪವರ್‌, ನಿರಂಜನ್, ಮಹಮ್ಮದ್ ವಾಸಿಂ, ರಾಣಿ, ಯೋಗೇಂದ್ರ ಇನ್ನೂ ಮುಂತಾದವರು ಹಾಜರಿದ್ದರು.

Share this article