ಹರಪನಹಳ್ಳಿ: ನಾಡಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಲಿ. ಚಂದ್ರಮೌಳೀಶ್ವರರು ಮಧ್ಯ ಕರ್ನಾಕದಲ್ಲಿ ಸಾಕಷ್ಟು ವಿದ್ಯಾ ಕೇಂದ್ರಗಳನ್ನು ತೆರೆದು ಮನೆ ಮನೆಗಳಲ್ಲಿ ಬೆಳಗುವ ದೀಪವಾಗಿದ್ದಾರೆ, ಅವರು ಮಾನವನ ಹುಟ್ಟು ಸಾವಿನ ನಂತರವು ಅಜರಾಮರವಾಗಿರಬೇಕು ಎನ್ನುವ ದೂರದೃಷ್ಠಿ ಹೊಂದಿ ಅದರಂತೆ ನಡೆದರು ಎಂದು ನುಡಿದರು.
ಎಷ್ಟೇ ಯುಗಗಳು ಕಳೆದರೂ ಅವರ ಮಹತ್ಕಾರ್ಯಗಳು ಎಂದಿಗೂ ಜೀವಂತವಾಗಿರುತ್ತವೆ, ಹರಪನಹಳ್ಳಿ ಅತಿ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿತ್ತು, ಅಂತಹ ತಾಲೂಕನ್ನು ರಾಜ್ಯ ಹೊರರಾಜ್ಯಗಳಿಂದ ಮಕ್ಕಳು ಶಿಕ್ಷಣ ಪಡೆಯಲು ಬರುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರನ್ನು ಕೇವಲ ಒಂದು ಪರಿಮಿತಿಯಿಂದ ನೋಡಲು ಆಗದು ಕಡುಕಷ್ಟದ ದಿನಗಳಿಂದ ಹುಟ್ಟು ಹೋರಾಟದ ಬದುಕನ್ನು ಸವೆಸುತ್ತ ಹೋರಾಟ ಮನೋಭಾವ ರೂಢಿಸಿಕೊಂಡಿದ್ದರು ಎಂದರು.ಲಿ.ಚಂದ್ರಮೌಳೀಶ್ವರರು ಹರಪನಹಳ್ಳಿಯಲ್ಲಿ ನೆಲೆಯೂರದಿದ್ದರೆ ಶಿಕ್ಷಣ ಕ್ಷೇತ್ರದ ಜತೆಗೆ ತಾಲೂಕಿನ ಅಭಿವೃದ್ಧಿಯನ್ನು ನಾವುಗಳು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಸಮಾಜವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸುಲಭವಾದ ಕಾರ್ಯವಲ್ಲ, ಮಠ ಅಭಿವೃದ್ಧಿಯಾಗುವ ಮುನ್ನ ಹರಪನಹಳ್ಳಿ, ಹಡಗಲಿ ಸೇರಿದಂತೆ ಇತರೆ ತಾಲೂಕುಗಳಿಗೆ ತೆರಳಿ ಜೋಳಿಗೆಯ ಮೂಲಕ ಪಡಿ ಹಕ್ಕಿಯಿಂದ ಮಠ ಕಟ್ಟಿ ಬೆಳೆಸಿದರು ಎಂದರು.
ತೆಗ್ಗಿನ ಮಠದಂತಹ ಮಠಗಳು ನಾಡಿನಲ್ಲಿ ಬೆರಳಣಿಕೆಯಷ್ಟಿದ್ದು, ಸಮಾಜದಲ್ಲಿ ಶಿಕ್ಷಣ ಕ್ರಾಂತಿ ಹಾಗೂ ಸಮಾಜ ಸೇವೆ ಮಾಡುವುದರಲ್ಲಿ ಶ್ರೀಮಠವು ನಾಡಿನಲ್ಲಿ ಮೊದಲನೆ ಸಾಲಿನಲ್ಲಿದೆ, ಇದರ ಏಳಿಗೆಗೆ ಟಿ.ಎಂ. ಚಂದ್ರಶೇಖರಯ್ಯನವರ ಪಾತ್ರ ಅಮೂಲ್ಯವಾದದ್ದು ಎಂದರು.
ಶ್ರೀಮಠವು ಕಷ್ಟದ ಕಾಲಘಟ್ಟದಲ್ಲಿ ಸಾಕಷ್ಟು ಸವಾಲು ಎದುರಿಸಿ ನಾಡಿನಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ 64ಕ್ಕೂ ಅಧಿಕ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲು ಸಾಧ್ಯವಾಯಿತು ಎಂದರು.
ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಟಿ.ಎಂ. ಚನ್ನವೀರಸ್ವಾಮಿ, ಟಿ.ಎಂ. ಪ್ರತೀಕ್, ಟಿ.ಎಂ. ಗುರುಬಸವರಾಜ್, ಸಂಸ್ಥೆಯ ಡೀನ್ ಟಿ.ಎಂ. ರಾಜಶೇಖರ್, ಟಿ.ಎಂ. ನಾಗರಾಜ್, ಟಿ.ಎಂ. ವೀರೇಶ್, ಎ.ವೀರಣ್ಣ, ಕರಿಬಸಪ್ಪ, ಪ್ರಾಚಾರ್ಯ ಸಿ.ಎಂ. ವೀರೇಶ್, ನಾಗೇಂದ್ರ, ಚರಣ್, ಅರುಣ್ ಕುಮಾರ್ ಸೇರಿದಂತೆ ಇತರರಿದ್ದರು.