ನಾಡಿನ ಶೈಕ್ಷಣಿಕ ಪ್ರಗತಿಗೆ ವಿರಕ್ತ ಮಠಗಳ ಕೊಡುಗೆ ಅಪಾರ: ಕೊಟ್ಟೂರು ಬಸವಲಿಂಗ ಶ್ರೀ

KannadaprabhaNewsNetwork |  
Published : May 10, 2024, 11:48 PM IST
10ಎಚ್‌ಪಿಟಿ1-ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದಲ್ಲಿ ಶುಕ್ರವಾರ ಬಸವ ಜಯಂತಿ, ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ 9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀ ಕೊಟ್ಟೂರು ಬಸವ ಲಿಂಗ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮತ್ತಿತರರಿದ್ದರು. | Kannada Prabha

ಸಾರಾಂಶ

12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಹೋರಾಡಿ ಜಾತಿ ವ್ಯವಸ್ಥೆ ವಿರುದ್ಧ ಕ್ರಾಂತಿ ಮಾಡಿದರು.

ಹೊಸಪೇಟೆ: ವಿರಕ್ತ ಮಠಗಳು ನಾಡಿನ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿವೆ ಎಂದು ಕೊಟ್ಟೂರು ಸಂಸ್ಥಾನ ಮಠದ ಶ್ರೀ ಕೊಟ್ಟೂರು ಬಸವ ಲಿಂಗ ಸ್ವಾಮೀಜಿ ಹೇಳಿದರು.ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ, ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ 51ನೇ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಹೋರಾಡಿ ಜಾತಿ ವ್ಯವಸ್ಥೆ ವಿರುದ್ಧ ಕ್ರಾಂತಿ ಮಾಡಿದರು. ಎಲ್ಲ ಸಮಾಜದವರನ್ನು ಅನುಭವ ಮಂಟಪಕ್ಕೆ ಕರೆತಂದು ಲಿಂಗ ಕಟ್ಟುವ ಮೂಲಕ ಲಿಂಗಾಯತರನ್ನಾಗಿ ಮಾಡಿ ಸಮಾಜದಲ್ಲಿ ಸೌಹಾರ್ದ, ಸಮಾನತೆ ತಂದರು. ಈಗ ನಾವು ಅವರ ತತ್ತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳದೇ ಜಾತಿ, ಜಾತಿ ಎಂದು ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವುದು ಸರಿಯಲ್ಲ ಎಂದರು.

ಸಾಮೂಹಿಕ ವಿವಾಹಗಳಿಂದ ತಗ್ಗುವ ಆರ್ಥಿಕ ಹೊರೆ:

ಶ್ರೀಮಠವು ಕಳೆದ 50 ವರ್ಷಗಳಿಂದ ಉಚಿತವಾಗಿ ಸಾಮೂಹಿಕ ವಿವಾಹಗಳುನ್ನು ಮಾಡುತ್ತ ಬಂದಿದೆ. ಸಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ತಗ್ಗಿಸಿ ಸುಖ, ಸಂಸಾರಕ್ಕೆ ಬುನಾದಿ ಆಗಲಿವೆ. ತಂದೆ, ತಾಯಿಗಳು ಮಕ್ಕಳನ್ನು ನೌಕರಿಗೆ ಮತ್ತು ಹಣ ಸಂಪಾದನೆ ಮಾಡುವ ನಿಟ್ಟಿನಲ್ಲಿ ಬೆಳೆಸುವುದು ಸರಿಯಲ್ಲ, ದೇಶಕ್ಕೆ ಕೊಡುಗೆ ನೀಡುವ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಸದ್ಯ ನಾವು ಗಿಡ ಮರಗಳನ್ನು ನಾಶಮಾಡಿದ ಪರಿಣಾಮ ವಿಪರೀತ ಬಿಸಿಲಿನ ತಾಪ ಅನುಭವಿಸುತ್ತಿದ್ದೇವೆ. ಪರಿಸರ ಸಂರಕ್ಷಣೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ಅಪಾಯ ತಪ್ಪಿದಲ್ಲ. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಇಂದು ಹೆಣ್ಣು ಮಕ್ಕಳಲ್ಲಿ ಬಂಜೆತನ ಸಮಸ್ಯೆ ಕಾಡುತ್ತಿದೆ. ರೈತರು ನಮ್ಮ ಸಾಂಪ್ರದಾಯಿಕ ಕೃಷಿಗೆ ಹೆಚ್ಚು ಅದ್ಯತೆ ನೀಡಬೇಕು. ಈ ಕುರಿತು ಮಠವು ಮುಂದಿನ ದಿನಗಳಲ್ಲಿ ಹಳ್ಳಿ, ಹಳ್ಳಿಗೆ ತೆರಳಿ ಭೂಮಿ ಸಂರಕ್ಷಣೆ ಮತ್ತು ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಲಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಮಕೂಟ ಕಿಂಡರ್ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ನವದಂಪತಿಗಳಿಗೆ ಹಿತವಚನ ಹೇಳಿದರು.

ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಹೇಮಕೂಟ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಇದಕ್ಕೂ ಮೊದಲು ಪೂಜ್ಯ ಶ್ರೀಸಿದ್ಧಲಿಂಗ ದೇಶಿಕರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಶ್ರೀಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಬಸವೇಶ್ವರರ ಭಾವಚಿತ್ರದೊಂದಿಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆಯು ಮಠಕ್ಕೆ ಸಾಗಿ ಬಂದಿತು.

ಒಂಬತ್ತು ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಶ್ರೀ ಮಹಾಂತಲಿಂಗ ಶಿವಚಾರ್ಯ ಮಹಾಸ್ವಾಮಿಗಳು, ಮರಿ ಕೊಟ್ಟೂರು ದೇಶಿಕರು, ಸಿದ್ಧೇಶ್ವರ ದೇಶಿಕರು, ವಿಶ್ವೇಶ್ವರ ದೇವರು, ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ಕೆ.ಗಾಗಧರಪ್ಪ, ಕೆ.ಬಿ. ಶ್ರೀನಿವಾಸ ರೆಡ್ಡಿ, ಕೆ.ಕೊಟ್ರೇಶ್, ಎಲ್‌. ಬಸವರಾಜ, ಎಚ್.ವಿ.ಶರಣಸ್ವಾಮಿ, ಕೋರಿ ಶೆಟ್ಟಿ ಲಿಂಗಪ್ಪ, ಗೊಗ್ಗ ಚನ್ನ ಬಸವರಾಜ, ಎಚ್.ಬಿಡ್ಡಪ್ಪ, ಸಾಲಿ ಬಸವರಾಜ, ಬಿ.ಚಿತ್ತಪ್ಪ, ಜಾಲಿ ಪ್ರಕಾಶ ಮತ್ತಿತರರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ