ಸಂಡೂರು: ಪೌರಾಣಿಕ ಮತ್ತು ಐತಿಹಾಸಿಕ ಕಥಾವಸ್ತುವನ್ನು ಹೊಂದಿರುವ ಬಯಲಾಟಗಳು ಒಳ್ಳೆಯ ಉದ್ದೇಶ ಹಾಗೂ ನೈತಿಕತೆಯನ್ನು ತಿಳಿಸುವ ಅಂಶಗಳನ್ನು ಹೊಂದಿವೆ. ನಾಟಕ, ಬಯಲಾಟಗಳಲ್ಲಿ ಮಹಿಳಾ ಪಾತ್ರಧಾರಿಗಳ ಸಾಧನೆ ದೊಡ್ಡದಿದೆ ಎಂದು ಕೂಡ್ಲಿಗಿಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಟಿ. ಕೊತ್ಲಮ್ಮ ಅಭಿಪ್ರಾಯಪಟ್ಟರು.
ಸ್ತ್ರೀ ಪಾತ್ರಧಾರಿಗಳು ಅವಿದ್ಯಾವಂತರಾಗಿದ್ದರೂ ಕ್ಲಿಷ್ಟಕರ ಸಂಭಾಷಣೆಗಳನ್ನು ಕಲಿತು, ರಂಗಪರಿಕರಗಳ ಜತೆಗೆ ಅವಮಾನ, ನಿಂದನೆಗಳನ್ನು ನುಂಗಿಕೊಂಡು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಇಂದು ನಾಟಕ, ಬಯಲಾಟಗಳಲ್ಲಿ ಸ್ತ್ರೀಯರು ಪುರುಷರ ಪಾತ್ರಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಹಿಳೆಯರ ಸಾಧನೆ ಎಲ್ಲರಿಗೂ ಆದರ್ಶವಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯ ಬಯಲಾಟ ಸಾಹಿತ್ಯ ಗದ್ಯ- ಪದ್ಯ ಸವಾಲು ಸಾಧ್ಯತೆಗಳು ಎಂಬ ವಿಷಯ ಕುರಿತು ಡಾ. ಮಲ್ಲಯ್ಯ ಹಾಗೂ ಬಯಲಾಟಗಳಲ್ಲಿ ಹಾಡುಗಳು ಮತ್ತು ಸಂಗೀತ ಎಂಬ ವಿಷಯ ಕುರಿತು ತಿಪ್ಪೇಸ್ವಾಮಿ ಮುದ್ದಟನೂರು ವಿಚಾರ ಮಂಡಿಸಿದರು. ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ ಅಧ್ಯಕ್ಷತೆ ವಹಿಸಿದ್ದರು.ಎಚ್. ಕುಮಾರಸ್ವಾಮಿ ನಿರೂಪಿಸಿದರು. ಶಿವರಾಮ ರಾಗಿ ವಂದಿಸಿದರು. ಮರಿಯಮ್ಮನಹಳ್ಳಿಯ ಹಿರಿಯ ರಂಗಕರ್ಮಿ ಹಾಗೂ ವೈದ್ಯ ಡಾ. ಬಿ. ಅಂಬಣ್ಣ, ಹಾರ್ಮೋನಿಯಂ ವಾದಕ ಲಕ್ಷ್ಮೀಪುರದ ಮೌನಾಚಾರಿ, ರೊಟ್ಟಿ ಷಣ್ಮುಖಪ್ಪ, ಲೋಕೇಶಪ್ಪ, ಸಿದ್ದಪ್ಪ ಸಿಡಿಗಿನಮಳೆ, ದೊಡ್ಡ ಅಂಜಿನಮ್ಮ, ಕಾಶಪ್ಪ, ಸಿದ್ದೇಶ್, ಪಾಪಯ್ಯ, ದೇವೇಂದ್ರಪ್ಪ ಕಮ್ಮಾರ್, ಮೂಲಿಮನೆ ಈರಣ್ಣ, ಅಜ್ಜಪ್ಪ ಸೇರಿದಂತೆ ೪೦ಕ್ಕೂ ಹೆಚ್ಚು ಕಲಾವಿದರನ್ನು ಸನ್ಮಾನಿಸಲಾಯಿತು.
ಕೂಡ್ಲಿಗಿಯ ವಿನಾಯಕ ಜ್ಯೋತಿ ಕಲಾ ಟ್ರಸ್ಟ್‌ನ ಕಲಾವಿದರಿಂದ ಭಾರ್ಗವ ಪರಶುರಾಮ ಬಯಲಾಟವನ್ನು ಪ್ರದರ್ಶಿಸಲಾಯಿತು. ಪರಶುರಾಮನಾಗಿ ಕೆ. ಮಲ್ಲಿಕಾರ್ಜುನಸ್ವಾಮಿ, ಕಾರ್ತ್ಯವೀರನಾಗಿ ರಾಜೇಂದ್ರ, ಜಮದಗ್ನಿಯಾಗಿ ವೀರಣ್ಣ ಎಮ್ಮಿಗನೂರು, ರೇಣುಕೆಯಾಗಿ ಜ್ಯೋತಿ ಕೂಡ್ಲಿಗಿ ಅಭಿನಯಿಸಿದರು.