ತಾಲೂಕಿನ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಇರುವ ಕುರುಬರಹಳ್ಳಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಕಳೆದ ಆರು ತಿಂಗಳಿಂದ ಮನವಿ ಮಾಡಿ ಬೇಸತ್ತ ಗ್ರಾಮಸ್ಥರು ಕೆಸರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿ ನಂತರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಇರುವ ಕುರುಬರಹಳ್ಳಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಕಳೆದ ಆರು ತಿಂಗಳಿಂದ ಮನವಿ ಮಾಡಿ ಬೇಸತ್ತ ಗ್ರಾಮಸ್ಥರು ಕೆಸರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿ ನಂತರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಕೇಂದ್ರ ಪೆದ್ದನಹಳ್ಳಿ ಗ್ರಾಮದ ಮುಖ್ಯ ರಸ್ತೆ ಕುರುಬರಹಳ್ಳಿ ಮೂಲಕ ಸಂಪಿಗೆ, ತುರುವೇಕೆರೆ ಸೇರುವ ಮಾರ್ಗದಲ್ಲಿ ನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಮಳೆಗಾಲದಲ್ಲಿ ತೀವ್ರ ಅವ್ಯವಸ್ಥೆ ಆಗಿದೆ. ಈ ಬಗ್ಗೆ ಮನವಿ ಮಾಡಿದಾಗ ಸಿಸಿ ರಸ್ತೆಯ ಮೇಲೆ ಮಣ್ಣು ಸುರಿದು ಅದ್ವಾನದ ರಸ್ತೆ ಮಾಡಿದ್ದಾರೆ. ಮಕ್ಕಳು ವೃದ್ಧರು ಓಡಾಡುವುದು ದುಸ್ತರವಾಗಿದೆ. ಹಾಲಿನ ವಾಹನ, ಶಾಲಾ ವಾಹನ ಇಲ್ಲಿ ಬರುತ್ತಿಲ್ಲ. ಎಷ್ಟು ಮನವಿ ಮಾಡಿದರೂ ಅನುದಾನವಿಲ್ಲ ಎಂಬ ಹಾರಿಕೆ ಉತ್ತರ ನೀಡುವ ಪಿಡಿಒ ನಿಮ್ಮ ಮನೆ ಮುಂದೆ ನೀವೇ ಸ್ವಚ್ಛ ಮಾಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಕಿಡಿಕಾರಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮುನಿರಾಜು ಮಾತನಾಡಿ, ಪಂಚಾಯಿತಿ ಅನುದಾನಗಳು ಎಲ್ಲಿ ಹೋಗಿದೆ ತಿಳಿದಿಲ್ಲ. ಬಹು ಬೇಡಿಕೆಯ ಈ ರಸ್ತೆ ದುರಸ್ತಿಗೆ ಮೀನಮೇಷ ಎಣಿಸುವ ಅಧಿಕಾರಿಗಳು ಪಂಚಾಯಿತಿ ಕೇಂದ್ರದಲ್ಲಿ ಕಚೇರಿ ಎದುರು ಈ ದುಸ್ಥಿತಿ ಅಪಹಾಸ್ಯ ಎನಿಸಿದೆ. ಗ್ರಾಮಸ್ಥರು ಕೆರಳಿ ಕಚೇರಿಗೆ ಬೀಗ ಜಡಿಯುವ ಹಂತಕ್ಕೆ ತಲುಪಿರುವುದು ಸರಿಯಲ್ಲ. ಅಧ್ಯಕ್ಷರಾದಿ ಎಲ್ಲಾ ಸದಸ್ಯರು ತುರ್ತು ಸಭೆ ನಡೆಸಿ ಅನುದಾನ ಬಳಸಿ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.ತುರುವೇಕೆರೆ ಸಂಪರ್ಕಿಸುವ ಕುರುಬರಹಳ್ಳಿ ರಸ್ತೆ ಆರಂಭದಲ್ಲೇ ವಿಘ್ನ ಎನ್ನುವಂತೆ ಆಗಿದೆ. ರಿಪೇರಿ ಎಂದು ಸಿಸಿ ರಸ್ತೆ ಮೇಲೆ ಮಣ್ಣು ಸುರಿದು ನಡೆದಾಡಲು ಆಗದಂತೆ ಮಾಡಿದ್ದಾರೆ. ಇದ್ದ ಬಾಕ್ಸ್ ಚರಂಡಿಯ ಕತೆ ಹೇಳತೀರದಾಗಿದೆ. ಸ್ವಚ್ಛತೆ ಕಾಣದ ಚರಂಡಿಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕೆಲ ದಿನಗಳಿಂದ ರಸ್ತೆ ಬದಿಯ ಮನೆಗಳಲ್ಲಿ ಪ್ರತಿ ನಿತ್ಯ ಒಬ್ಬಾರದಂತೆ ಒಬ್ಬರು ಜ್ವರದಿಂದ ಮಲಗುತ್ತಿದ್ದಾರೆ. ಈ ಬಗ್ಗೆ ಕೂಡ ಕಿಂಚಿತ್ತೂ ಯೋಚಿಸದ ಅಧಿಕಾರಿಗಳು ಇತ್ತ ಕಡೆ ಬಂದಿಲ್ಲ. ರಸ್ತೆ ಚರಂಡಿ ಬಗ್ಗೆ ತಾಲೂಕು ಪಂಚಾಯಿತಿ ಇಒ ಶಿವಪ್ರಕಾಶ್ ಅವರಿಗೆ ತಿಳಿಸಿದರೂ ಕ್ರಮ ಜರುಗಿಸಿಲ್ಲ. ಪ್ರತಿಭಟನೆ ವಿಚಾರ ತಿಳಿದರೂ ಸ್ಥಳಕ್ಕೆ ಬಂದಿಲ್ಲ ಎಂದು ತೀವ್ರ ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು ಕೆಸರಿನಲ್ಲಿ ಬಾಳೆಗಿಡ ನೆಟ್ಟು ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆ ವಿಚಾರ ತಿಳಿದು ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಮ್ಮ ಮಾತನಾಡಿ ಈ ರಸ್ತೆಗೆ ಮಣ್ಣು ಹಾಕಿ ದುರಸ್ತಿಗೆ ಮುಂದಾದಾಗ ಸ್ಥಳೀಯರು ಸಿಸಿ ರಸ್ತೆ ಇದೆ. ಮಣ್ಣು ಹಾಕುವುದು ಬೇಡ ಎಂದು ನಿಲ್ಲಿಸಿದ್ದರು. ಈಗ ರಿಪೇರಿಗೆ ಹೆಚ್ಚಿನ ಅನುದಾನ ಬೇಕಿದೆ. ಶಾಸಕರು, ಸಚಿವರ ಬಳಿ ಹೋಗಿ ಕೇಳುವ ಅಗತ್ಯವಿದೆ. ಎಲ್ಲಾ ಸದಸ್ಯರು ಒಗ್ಗೂಡಿ ಹೋಗೋಣ ಎಂದರೆ ಯಾರೂ ಮುಂದಾಗಿಲ್ಲ. ತಕ್ಷಣಕ್ಕೆ ಮೂವರು ಸದಸ್ಯರ 1.50 ಲಕ್ಷ ಜೊತೆಗೆ 50 ಸಾವಿರ ಹೆಚ್ಚುವರಿ ಹಣದಲ್ಲಿ ದುರಸ್ತಿ ಮಾಡುವ ಭರವಸೆ ನೀಡಿದರು. ಸ್ಥಳದಲ್ಲಿ ಸದಸ್ಯರಾದ ರಂಗಸ್ವಾಮಿ, ಬಸವರಾಜು, ಶ್ರೀನಿವಾಸ್, ಮುಖಂಡರಾದ ಕುಮಾರಯ್ಯ, ಪಂಚಾಕ್ಷರಿ, ಬಸವಯ್ಯ, ಜಯಣ್ಣ, ರಂಗಪ್ಪ, ಮಂಜುಳಾ, ತನುಶ್ರೀ, ಸಾವಿತ್ರಮ್ಮ, ಪವಿತ್ರ ರಾಜಣ್ಣ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.