ಕನ್ನಡಪ್ರಭವಾರ್ತೆ ಪಾವಗಡ
ತಾಲೂಕು ಒಕ್ಕಲಿಗ ಸಮುದಾಯದ ವತಿಯಿಂದ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕುಮಾರಸ್ವಾಮಿ ಬಡಾವಣೆಯ ಹೆಸರು ಮರುನಾಮಕರಣ ಗೊಳಿಸಬಾರದೆಂದು ಪುರಸಭೆಗೆ ಒತ್ತಾಯಿಸಿದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ತಿಪ್ಪೇ ಈರಣ್ಣ ಮಾತನಾಡಿ, ತಿಮ್ಮರಾಯಪ್ಪ ಶಾಸಕರಾಗಿದ್ದ ಕಾಲದಲ್ಲಿ ಪಟ್ಟಣದ ಸುಮಾರು 400ಮಂದಿ ಕಡುಬಡವರಿಗೆ,ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ. ಆ ಬಡಾವಣೆಗೆ ಮೂಲಭೂತ ಸೌಯರ್ಕ ಕಲ್ಪಿಸಿಕೊಡಲಾಗಿದೆ. ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಈ ವೇಳೆ ಕುಮಾರಸ್ವಾಮಿ ಇಲ್ಲಿಗೆ ಅಗಮಿಸಿ ಬಡಾವಣೆಯ ನಾಗರಿಕರಿಂದ ಅಭಿನಂದನೆ ಹಾಗೂ ಸನ್ಮಾನ ಸಹ ಸ್ವೀಕರಿಸಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಬಡಾವಣೆ ಎಂದು ಪುರಸಭೆಯಿಂದ ನಾಮಕರಣಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಹೀಗಿದ್ದರೂ ರಾಜಕೀಯ ಪಿತೂರಿ ನಡೆಸಿ ಕುಮಾರಸ್ವಾಮಿ ಬಡಾವಣೆಯ ಹೆಸರು ಬದಲಾಯಿಸುವ ಮೂಲಕ ವೆಂಕಟರಮಣಪ್ಪ ಬಡಾವಣೆ ಎಂದು ಮರುನಾಮಕರಣಕ್ಕೆ ಮುಂದಾಗಿರುವುದು ಸರಿಯಲ್ಲ. ಕುಮಾರಸ್ವಾಮಿ ಬಡಾವಣೆಗೆ ಮರು ನಾಮಕರಣಗೊಳಿಸಿದರೆ,ಒಕ್ಕಲಿಗ ಸಮುದಾಯಕ್ಕೆ ದ್ರೋಹವೆಸಗಿದಂತಾಗಲಿದೆ. ಇದನ್ನು ವಿರೋಧಿಸಿ ಒಕ್ಕಲಿಗ ಸಂಘಟನೆಗಳಿಂದ ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ಎಚ್ಚರಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎನ್.ಈರಣ್ಣ . ತಾಲೂಕು ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರಾದ ಮಂಗಳವಾಡ ರಂಗಣ್ಣ,ಕೆ.ಟಿ.ಹಳ್ಳಿ ನಾಗಣ್ಣ,ಚಂದ್ರಣ್ಣ, ಶೇಖರಣ್ಣ, ಕ್ಯಾತನಹಳ್ಳಿಯ ಈರಣ್ಣ ಹಾಗೂ ಇತರೆ ಅನೇಕ ಮಂದಿ ಒಕ್ಕಲಿಗ ಸಂಘದ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.