ಶಾಲಾಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ

KannadaprabhaNewsNetwork | Published : Jun 17, 2024 1:42 AM

ಸಾರಾಂಶ

ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತ್ಯಂತ ಮುಖ್ಯವಾಗಿದ್ದು. ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಹೊಸಕೋಟೆ ಕಸ್ಲರ್ ಸಿ.ಆರ್.ಪಿ. ಪ್ರಭು ಹೇಳಿದರು.

ಕೆ.ಆರ್. ನಗರ: ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತ್ಯಂತ ಮುಖ್ಯವಾಗಿದ್ದು. ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಹೊಸಕೋಟೆ ಕಸ್ಲರ್ ಸಿ.ಆರ್.ಪಿ. ಪ್ರಭು ಹೇಳಿದರು.

ಸಾಲಿಗ್ರಾಮ ತಾಲೂಕಿನ ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2024-25 ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಯೂಟ, ಉಚಿತ ಪುಸ್ತಕ, ಸಮವಸ್ತ್ರ ಸೇರಿ ಇತರ ಸೌಲಭ್ಯ ನೀಡಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಕಾರ್ಯ ಯೋಜನೆ ಹಮ್ಮಿಕೊಂಡಿದ್ದು, ಇದರಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಾಗುತ್ತಿದ್ದು, ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸಹಕಾರ ನೀಡಿ ಎಂದರು.

ಸರ್ಕಾರಿ ಶಾಲೆಯಲ್ಲಿ ಓದಿದವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದರ ಜತೆಗೆ ಯಶಸ್ವಿ ಉದ್ಯಮಿ ಮತ್ತು ರಾಜಕಾರಣಿಗಳಾಗಿದ್ದು, ಇವರು ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ನೂತನ ವಿದ್ಯಾರ್ಥಿ ಸಂಘ ಈ ಶಾಲೆಯ ಏಳಿಗೆಗೆ ಶ್ರಮಿಸಬೇಕು ಎಂದರು.

ಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮೇಗೌಡ, ಸದಸ್ಯರಾದ ಗೀತಾ ದಿನೇಶ್, ಗಣೇಶ್, ಡೈರಿ ಅಧ್ಯಕ್ಷ ರಾಮಕೃಷ್ಣೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕೇಶ್, ಸದಸ್ಯೆ ಗೀತಾ, ನಿವೃತ್ತ ಶಿಕ್ಷಕ ಗದ್ದಿಲಕ್ಕೇಗೌಡ, ಗ್ರಾಮದ ಯಜಮಾನರಾದ ತಮ್ಮಯ್ಯ, ರಾಜಪ್ಪ ಗಂಗಾಧರ, ಅರುಣ್‌ಕುಮಾರ್, ಮಂಜುನಾಥ್, ರವಿ ಮುಖ್ಯ ಶಿಕ್ಷಕಿ ಸುಮಾಮಣಿ, ಶಿಕ್ಷಕರಾದ ಬಸವರಾಜು, ಕಿರಣ್ ಕುಮಾರ್, ಯೋಗೇಶ ಮೊದಲಾದವರು ಇದ್ದರು.

Share this article