ಸರ್ಕಾರದಿಂದ ಪಾಲಿಕೆಗೆ ಅನುದಾನ ಬಂದಿಲ್ಲ

KannadaprabhaNewsNetwork |  
Published : Jan 14, 2026, 02:45 AM IST
ಪೊಟೊ: 13ಎಸ್‌ಎಂಜಿಕೆಪಿ02ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ 2026-27 ನೇ ಸಾಲಿನ ಆಯ-ವ್ಯಯ ಒಂದನೇ ಪೂರ್ವಭಾವಿ ಸಭೆಯಲ್ಲಿ ಆಯುಕ್ತ ಮಾಯಣ್ಣಗೌಡ ಮಾತನಾಡಿದರು.  | Kannada Prabha

ಸಾರಾಂಶ

2025-2026ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು 165 ಕೋಟಿ ರು.ಗಳ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇಲ್ಲಿಯ ತನಕ ಪಾಲಿಕೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದರು.

ಶಿವಮೊಗ್ಗ: 2025-2026ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು 165 ಕೋಟಿ ರು.ಗಳ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇಲ್ಲಿಯ ತನಕ ಪಾಲಿಕೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದರು.

ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ 2026-27ನೇ ಸಾಲಿನ ಆಯವ್ಯಯ ಒಂದನೇ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಸಭೆಯ ಆರಂಭದಲ್ಲಿ ಕಳೆದ ಸಾಲಿನಲ್ಲಿ ತಯಾರಿಸಿದ ಆಯವ್ಯಯದ ಅನುಷ್ಠಾನ ಕುರಿತ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಅಧಿಕಾರಿಗಳು ಪಿಪಿಟಿ ಮೂಲಕ ತೋರಿಸಿ ಮನವರಿಕೆ ಮಡಲು ಯತ್ನಿಸಿದಾಗ ನಾಗರಿಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ ಪದಾಧಿಕಾರಿಗಳಾದ ಕೆ.ವಿ.ವಸಂತ್‌ಕುಮಾರ್, ಡಾ.ಸತೀಶ್‌ಕುಮಾರ್ ಶೆಟ್ಟಿ, ಪರಿಸರ ರಮೇಶ್ ಅವರು ಮುದ್ರಿತ ಪ್ರತಿಯನ್ನು ಸಭೆಗೆ ಪೂರೈಸಿದ ನಂತರವೇ ಸಭೆಯನ್ನು ಮುಂದುವರಿಸಬೇಕು ಎಂದು ಪಟ್ಟುಹಿಡಿದರು.

ಪ್ರಮುಖ ಸಭೆಯನ್ನು ಆಯೋಜಿಸಿದಾಗ ಅಂಕಿಅಂಶಗಳ ಮುದ್ರಿತ ಪ್ರತಿಯನ್ನು ಸದಸ್ಯರಿಗೆ ನೀಡಬೇಕು ಎಂಬ ವ್ಯವದಾನ ಪಾಲಿಕೆಯ ಅಧಿಕಾರಿಗಳಿಗೆ ಇರಬೇಕು ಎಂದು ತರಾಟೆಗೆ ತೆಗೆದುಕೊಂಡರು.ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಇಲ್ಲಿಯವರೆಗೂ ಒಂದು ನಯಾಪೈಸೆಯೂ ಸರ್ಕಾರದಿಂದ ಬಂದಿಲ್ಲ. ಎಲ್ಲಾ ಪ್ರಸ್ತಾವನೆಗಳಿಗೆ ಕೇವಲ ಮಂಜೂರಾತಿ ದೊರಕಿದೆ. ಮಹಾತ್ಮಗಾಂಧಿ ನಗರಯೋಜನೆ-2ಕ್ಕೆ 120 ಕೋಟಿ ರು., ಎನ್‌ಜಿಟಿ ಕಾಮಗಾರಿಗಳಿಗೆ 40 ಕೋಟಿ ರು. ಮಂಜೂರಾತಿ ದೊರಕಿದೆ. ಅದರ ಅನುದಾನ ಬಂದಿಲ್ಲ. ಈ ಪ್ರಸ್ತಾವಿತ ಯೋಜನೆಗಳಿಗೆ ಹಣ ಬಂದರೂ ಎನ್‌ಜಿಟಿ, ಕೆಯುಐಡಿಎಫ್‌ಸಿ ಮೂಲಕವೇ ಟೆಂಡರ್ ಪ್ರಕ್ರಿಯೆ ಕಾಮಗಾರಿ ಆರಂಭವಾಗಲಿದೆ. ಪಾಲಿಕೆ ವ್ಯಾಪ್ತಿಯ ನವುಲೆ, ತ್ಯಾವರೆಚಟ್ನಹಳ್ಳಿ, ಗೋಪಿಶೆಟ್ಟಿಕೊಪ್ಪ, ಪುರಲೆ ಮೊದಲಾದ ನಾಲ್ಕು ಕೆರೆಗಳ ಅಭಿವೃದ್ಧಿಗೆ 25 ಕೋಟಿ ರು. ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದು ಡಿಪಿಆರ್ ಹಂತದಲ್ಲಿದೆ. ಪಾಲಿಕೆ ವ್ಯಾಪ್ತಿಯ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರು. ಮೊತ್ತದ ಟೆಂಡರ್ ಕರೆಯಲಾಗಿದೆ. ಇವು ಯಾವುದಕ್ಕೂ ಸರ್ಕಾರದಿಂದ ಪಾಲಿಕೆಗೆ ನೇರವಾಗಿ ಹಣ ಬರುವುದಿಲ್ಲ ಎಂದು ಪುನರುಚ್ಚರಿಸಿದರು.

ಪಾಲಿಕೆಯ ವ್ಯಾಪ್ತಿಯಲ್ಲಿ 196 ಪಾರ್ಕುಗಳಿದ್ದು, 98 ಪಾರ್ಕುಗಳಿಗೆ ಬೇಲಿ, ಕಾಂಪೌಂಡ್ ಗೋಡೆ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. 2014ರಲ್ಲೇ ನಗರಸಭೆಯು ಪಾಲಿಕೆಯಾಗಿ ಪದನ್ನೋತಿ ಹೊಂದಿದ್ದರೂ ಪಾರ್ಕ್‌ನಿರ್ವಹಣೆಗೆ ಪ್ರತ್ಯೇಕ ತೋಟಗಾರಿಕಾ ಇಲಾಖೆ ಇರಲಿಲ್ಲ. ಸೂಡಾದಿಂದ ೫೩ ಪಾರ್ಕುಗಳ ಅಭಿವೃದ್ಧಿಗೆ ನಿರಾಕ್ಷೇಪಣಾ ಪತ್ರ ಕೇಳಿದ್ದು, ಪಾರ್ಕ್ ಅಭಿವೃದ್ಧಿಯಾದ ಬಳಿಕ ಅವು ಪಾಲಿಕೆಗೆ ಹಸ್ತಾಂತರವಾದ ನಂತರ ಅವುಗಳ ನಿರ್ವಹಣೆ ಪಾಲಿಕೆಯದ್ದಾಗಿರುತ್ತದೆ. ಈಗ ಪಾಲಿಕೆಯನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ, 75 ಪಾರ್ಕ್‌ಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.ಕ್ರೀಡಾಪಟುಗಳಿಗೆ ಅದರಲ್ಲೂ ವಿಶೇಷವಾಗಿ ಬಾಕ್ಸಿಂಗ್‌ನಲ್ಲಿ ಸಾಧನೆಗೈದವರಿಗೆ ಪಾಲಿಕೆಯಿಂದ ವಿಶೇಷ ಪುರಸ್ಕಾರ ನೀಡುವ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ನೆಹರೂ ಮೈದಾನದಲ್ಲಿ ಈ ಕ್ರೀಡಾಪಟುಗಳಿಗೆ ಅನುಕೂಲವಾಗಲು ಬಾಕ್ಸಿಂಗ್‌ಶೆಡ್‌ವೊಂದನ್ನು ನಿರ್ಮಿಸಬೇಕು ಎಂಬ ಸದಸ್ಯರ ಸಲಹೆಗೆ ಉತ್ತರಿಸಿದ ಆಯುಕ್ತರು, ನೆಹರೂ ಮೈದಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪಾಲಿಕೆಗೆ ಅವಕಾಶವಿಲ್ಲ ಎಂದರು.ಸ್ಮಾರ್ಟ್‌ಸಿಟಿಯಾದರೂ ಖಾಸಗಿ ಬಸ್ ನಿಲ್ದಾಣದ ಶೌಚಾಲಯ ನಿರ್ವಹಣೆ ಇಲ್ಲದೆ ನಗರದ ಮಾನಮರ್ಯಾದೆ ಕಳೆಯುತ್ತಿದೆ. ಕೂಡಲೇ ಶೌಚಾಲಯ ನಿರ್ವಹಣೆಗೆ ವಿಶೇಷ ಅನುದಾನ ನೀಡಿ ನಿರ್ವಹಣೆ ಮಾಡಿ. ಪಾಲಿಕೆಯ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗಿ ೩ ವರ್ಷವಾದರೂ ಕೂಡ ಬಾಡಿಗೆಗೆ ನೀಡಿಲ್ಲ. ಆದಾಯ ಇಲ್ಲದೆ ತೆರಿಗೆ ಹಣ ವ್ಯರ್ಥವಾಗಿದೆ. ಇನ್ನು ಮುಂದೆ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಹಣನೀಡಬೇಡಿ. ಶುದ್ಧ ಕುಡಿಯುವ ನೀರಿನ ಯೋಜನೆ ತಯಾರಾಗಿ ವರ್ಷಗಳೇ ಕಳೆದರೂ ಇನ್ನೂ ಕೂಡ ಸುಸಜ್ಜಿತ ನೀರಿನ ಪ್ರಯೋಗಾಲಯ ಮತ್ತು ಅದಕ್ಕೆ ಬೇಕಾದ ಉಪಕರಣಗಳು ಇನ್ನೂ ಬಂದಿಲ್ಲ. 15 ವರ್ಷಗಳ ಕೂಗು ವ್ಯರ್ಥವಾಗಿದ್ದು, ಬೇರೆ ನಗರಗಳ ನೀರು ಶುದ್ಧಿಕರಣ ಘಟಕದ ಮಾಹಿತಿ ಮತ್ತು ಮಾದರಿ ನೀಡಿದ್ದರೂ ನಮ್ಮ ಶಿವಮೊಗ್ಗದಲ್ಲಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಒಂದು ಕಾಲದಲ್ಲಿ ನೀರಿನ ಸೆಲೆಯಾಗಿದ್ದ ನಗರದ ನವುಲೆ ಕೆರೆಗೆ ಈಗ ಮೂರು ಅಡಿ ವ್ಯಾಸದ ಪೈಪ್‌ಲೈನ್‌ಗಳಲ್ಲಿ ತ್ಯಾಜ್ಯ ನೀರು ಸೇರುತ್ತಿದೆ. ಮಳೆಗಾಲದಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಕೆರೆಗೆ ಬರುವ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಸಿರೀಕರಣಕ್ಕಾಗಿ ಸದ್ಯಕ್ಕೆ ಹೊಸಯೋಜನೆ ಬೇಡ. ಇದೂವರೆಗೆ ಹಸಿರೀಕರಣದ ಹೆಸರಿನಲ್ಲಿ ಖರ್ಚುಮಾಡಿದ ಹಣವನ್ನು ಮತ್ತು ಗಿಡಗಳನ್ನು ಸದುಪಯೋಗ ಮಾಡಿ ಎಂದು ಸಲಹೆ ನೀಡಿದರು.ಸಭೆಯಲ್ಲಿ ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಪತ್‌ ಸದಸ್ಯರಾದ ಬಲ್ಕೀಸ್ ಬಾನು, ಡಾ.ಧನಂಜಯ್‌ ಸರ್ಜಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯನ್ನು ಆನೆ ಅಟ್ಟಿಸಿ ಹೋಗಿ ತುಳಿದು ಹತ್ಯೆ
ಡಾ.ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಚೇತರಿಕೆ