ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಮುಗಿಯಿತು. ಆಡಳಿತ ಪಕ್ಷದ ಸಭಾನಾಯಕರ ಆಯ್ಕೆಯನ್ನೂ ಬಿಜೆಪಿ ಮುಗಿಸಿದೆ. ಇದೀಗ ಆಡಳಿತ ಪಕ್ಷಕ್ಕೆ ಠಕ್ಕರ್ ಕೊಡುವಂತಹ ವಿರೋಧ ಪಕ್ಷದ ನಾಯಕರ ಆಯ್ಕೆಗೆ ಕಾಂಗ್ರೆಸ್ ಕಸರತ್ತು ನಡೆಸಿದೆ.
ಮೇಯರ್ ರಾಮಣ್ಣ ಬಡಿಗೇರ ಹಾಗೂ ಸಭಾನಾಯಕರಾಗಿ ವೀರಣ್ಣ ಸವಡಿ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಈ ಇಬ್ಬರು ಹಿರಿಯ ಸದಸ್ಯರೇ. ಪಾಲಿಕೆಗೆ ನಾಲ್ಕು ಸಲ ಆಯ್ಕೆಯಾದವರೇ. ಅನುಭವದಲ್ಲಿ ಸಾಕಷ್ಟು ವಾಕ್ಚಾತುರ್ಯ ಹೊಂದಿದವರು. ಸಾಕಷ್ಟು ಅನುಭವಿಗಳು. ಇವರಿಬ್ಬರಿಗೂ ಠಕ್ಕರ್ ಕೊಡುವಂತಹವರನ್ನೇ ಆಯ್ಕೆ ಮಾಡಬೇಕೆನ್ನುವುದು ಕಾಂಗ್ರೆಸ್ ಇರಾದೆ.
ಯಾರ್‍ಯಾರು ರೇಸ್‌ನಲ್ಲಿ:
ಮೊದಲ ಎರಡು ಅವಧಿಯಲ್ಲಿ ದೊರಾಜ್ ಮಣಿಕುಂಟ್ಲ (ಪೂರ್ವ), ಸುವರ್ಣ ಕಲಕುಂಟ್ಲ (ಸೆಂಟ್ರಲ್) ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಪಶ್ಚಿಮ ಅಥವಾ ಧಾರವಾಡ ಗ್ರಾಮೀಣ ಕ್ಷೇತ್ರದ ಸದಸ್ಯರು ತಮ್ಮ ಕ್ಷೇತ್ರಕ್ಕೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸದಸ್ಯರಲ್ಲಿ ಪೈಪೋಟಿ ಜೋರಾಗಿದೆ.
ಚುನಾಯಿತರಾದ ರಾಜಶೇಖರ ಕಮತಿ, ಶಂಭುಗೌಡ ಸಾಲಮನಿ, ಕವಿತಾ ದಾನಪ್ಪ ಕಬ್ಬೇರ, ಶಂಕರ ಹರಿಜನ, ಇಮ್ರಾನ್ ಯಲಿಗಾರ ಇವರೆಲ್ಲರೂ ಧಾರವಾಡ ಹಾಗೂ ಪಶ್ಚಿಮ ಕ್ಷೇತ್ರದ ಸದಸ್ಯರಾಗಿದ್ದಾರೆ. ಇವರ ನಡುವೆ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಆರೀಫ ಭದ್ರಾಪುರ ಕೂಡ ಪ್ರಯತ್ನ ನಡೆಸಿದ್ದಾರೆ. ಇದೊಂದು ಸಲ ಸೆಂಟ್ರಲ್ ಕ್ಷೇತ್ರಕ್ಕೆ ಕೊಡಿ ಎಂಬ ಬೇಡಿಕೆ ಭದ್ರಾಪುರ ಅವರದ್ದು.
ಇವರೆಲ್ಲರೂ ಮೊದಲ ಸಲ ಪಾಲಿಕೆಯನ್ನು ಪ್ರವೇಶಿಸಿದವರು. ಹೀಗಾಗಿ ಬಿಜೆಪಿಗೆ ಠಕ್ಕರ್ ಕೊಡಬಲ್ಲರೇ ಎಂಬ ಯೋಚನೆಯನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಎರಡ್ಮೂರು ಸಲ ಆಯ್ಕೆಯಾಗಿದ್ದ ಕಲಕುಂಟ್ಲಾ ಹಾಗೂ ಮಣಿಕುಂಟ್ಲಾ ಈಗಾಗಲೇ ವಿಪಕ್ಷ ನಾಯಕ ಸ್ಥಾನ ಅಲಂಕರಿಸಿದ್ದರಿಂದ ಈ ಸಲ ಯಾರಿಗೆ ಕೊಟ್ಟರೂ ಅವರು ಮೊದಲ ಬಾರಿಯ ಸದಸ್ಯರೇ ಆಗಿದ್ದಾರೆ. ಹೀಗಾಗಿ ಇದ್ದವರಲ್ಲೇ ಬಿಜೆಪಿಗೆ ಯಾರು ಠಕ್ಕರ್ ಕೊಡಬಹುದು ಎಂಬುದನ್ನು ಲೆಕ್ಕ ಹಾಕಿ ಅಳೆದು ತೂಗಿ ವಿಪಕ್ಷ ನಾಯಕತ್ವ ನೀಡಬೇಕು ಎಂಬ ಯೋಚನೆ ಪಕ್ಷದ ಮುಖಂಡರದ್ದು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಮುಖಂಡ ದೀಪಕ ಚಿಂಚೋರೆ ಅವರೊಂದಿಗೆ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಒಂದು ಸುತ್ತಿನ ಚರ್ಚೆಯನ್ನೂ ಮಾಡಿದ್ದಾರೆ. ಜು. 15ರ ನಂತರ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ನೂತನ ಮೇಯರ್ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ನಡೆಯಲಿದೆ. ಅಷ್ಟರೊಳಗೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕನ್ನಾಗಿ ಯಾರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಕುತೂಹಲ ಮಾತ್ರ ಕೆರಳಿಸಿದೆ. ಯಾರಾಗ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ವಿರೋಧ ಪಕ್ಷದ ನಾಯಕನ ಆಯ್ಕೆಗೆ ಈಗಾಗಲೇ ಒಂದು ಸಲ ಚರ್ಚೆ ನಡೆಸಲಾಗಿದೆ. ಜು. 15ರ ನಂತರ ಮುಖಂಡರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರು ಹೇಳಿದರು.