ಕನ್ನಡಪ್ರಭ ವಾರ್ತೆ ಶಿರಸಿ
ಸಜ್ಜನರು ನಿಷ್ಕ್ರಿಯವಾಗಿರುವುದರಿಂದ ದುರ್ಜನರ ಕೂಟ ವಿಜೃಂಭಿಸುತ್ತಿದ್ದು, ಜವಾಬ್ದಾರಿಯುತವಾಗಿ ವಿಚಾರ ಮಾಡುವವರ ಸಂಖ್ಯೆ ಹೆಚ್ಚಬೇಕು. ಆಗ ದೇಶ ಬಲಿಷ್ಠವಾಗಲಿದೆ ಎಂದು ವಾಯುಪಡೆಯ ನಿವೃತ್ತ ಸೇನಾಧಿಕಾರಿ ಮುರಾರಿ ಭಟ್ಟ ಹೇಳಿದರು.ಸೋಮವಾರ ನಗರದ ರಂಗಧಾಮದಲ್ಲಿ ಬೆಂಗಳೂರಿನ ಆಲ್ ಯೂನಿಫಾರ್ಮ್ ಟ್ರೈನಿಂಗ್ ಅಕಾಡೆಮಿ ಮತ್ತು ಭಾರತ್ ಭಾರತಿ ಟ್ರಸ್ಟ್ ಸಹಯೋಗದಲ್ಲಿ ಶಿರಸಿಯ ನಿವೃತ್ತ ಸೈನಿಕ ತಂಡದಿಂದ ಏರ್ಪಡಿಸಲಾದ ಅಗ್ನಿವೀರ್ ಆಕಾಂಕ್ಷಿಗಳಿಗೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಬರಬಾರದು. ದೇಶದ ಭದ್ರತೆ ಹಾಗೂ ಚಿಂತನೆಯನ್ನಿಟ್ಟುಕೊಂಡು ದೇಶ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ದೇಶದಲ್ಲಿ ಜನಸಂಖ್ಯೆ ಕಡಿಮೆ ಇಲ್ಲ. ಒಳ್ಳೆಯ ಅವಕಾಶ ಬಳಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಬಲರಾಗಬೇಕಾದರೆ ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಉತ್ತರಭಾರತದ ಪ್ರತಿ ಕುಟುಂಬದಲ್ಲಿ ಸೈನಿಕರನ್ನು ಕಾಣುತ್ತೇವೆ. ಜವಾಬ್ದಾರಿ ಅರಿತು ಕೆಲಸ ಮಾಡಿರೆ ವಿಫುಲ ಅವಕಾಶವಿದೆ. ದಕ್ಷಿಣ ಭಾರತದವರು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ನಿವೃತ್ತ ಸೈನಿಕರ ತಂಡವು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.ದೇಶದ ಗಡಿಭಾಗದ ರಾಜ್ಯದಲ್ಲಿ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಭಾರತದ ಯುವಕರನ್ನು ನಿರ್ವಿರ್ಯರನ್ನಾಗಿ ಮಾಡಲ ಸಂಚು ವಿರೋಧಿಗಳಿಂದ ನಡೆಯುತ್ತಿದೆ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ನಮ್ಮ ದೇಶವನ್ನು ಆಳ್ವಿಕೆ ನಡೆಸಿದ್ದಾರೆ. ಆದ್ದರಿಂದ ನಮ್ಮ ಜಗಳದಿಂದ ಮೂರನೇ ವ್ಯಕ್ತಿ ಲಾಭ ಪಡೆಯದಂತೆ ನಾವು ಎಚ್ಚರಿಕೆಯಿಂದ ಇರಬೇಕು. ಸೈನ್ಯದಲ್ಲಿ ವಿಫುಲ ಅವಕಾಶವಿದೆ. ಅಗ್ನಿವೀರಕ್ಕೆ ಸೇರಿದವರು ಮುಂದೆ ಅಧಿಕಾರಿಗಳಾಗಿ ಮುಂದುವರೆಯಬಹುದು. ಶಿರಸಿಯಲ್ಲಿ ತರಬೇತಿ ಶಿಬಿರ ಆಯೋಜಿಸಿರುವುದು ಹೆಮ್ಮೆಯ ವಿಷಯ.
ನಿವೃತ್ತ ಸೈನಿಕ ಮೇಜರ್ ಸಂಜಯ ಮೆಹರೋತ್ರ ತರಬೇತಿ ಶಿಬಿರದ ಪ್ರಾರಂಭೋತ್ಸವ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಸೈನಿಕ, ಭಾರತ ಭಾರತಿ ಟ್ರಸ್ಡ್ ಬೆಂಗಳೂರು ಘಟಕದ ಅಧ್ಯಕ್ಷ ಮೇಜರ್ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ಟಿಎಸ್ಎಸ್ ಆಸ್ಪತ್ರೆಯ ವೈದ್ಯ ಮೇಜರ್ ಜೆ.ಬಿ. ಕಾರಂತ, ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಜಿ.ಟಿ. ಭಟ್ಟ, ನಿವೃತ್ತ ಪ್ರಾಂಶುಪಾಲೆ ಕೋಮಲಾ ಭಟ್ಟ, ಲೆಕ್ಕ ಪರಿಶೋಧಕ ಉದಯ ಸ್ವಾದಿ, ಟಿಎಸ್ಎಸ್ ಉಪಾಧ್ಯಕ್ಷ ಎಂ.ಎನ್. ಭಟ್ಟ, ಉದ್ಯಮಿ ಸತೀಶ ಹೆಗಡೆ ಚಿಪಗಿ, ನೇತಾಜಿ ಸುಭಾಶ್ಚಂದ್ರ ಬೋಸ್ ಕಾರ್ಯಪಡೆ ಅಧ್ಯಕ್ಷ ಕೇಶವ ದೊಂಬೆ, ಎಂಇಎಸ್ ಕಾಲೇಜಿನ ಉಪನ್ಯಾಸಕ ವಿ.ಜಿ. ಹೆಗಡೆ, ನಿವೃತ್ತ ಮುಖ್ಯಾಧ್ಯಾಪಕ ಕೆ.ಆರ್. ಹೆಗಡೆ ಕಾನಸೂರು, ನಿವೃತ್ತ ಸೈನಿಕರಾದ ಎಸ್.ಎಸ್. ಭಟ್ಟ, ಜಿ.ವಿ. ಹೆಗಡೆ, ವಿನಾಯಕ ಧೀರನ್ ಮತ್ತಿತರರು ಇದ್ದರು. ನಿವೃತ್ತ ಸೈನಿಕರಾದ ಜಿ.ಎಸ್. ಹೆಗಡೆ ಪ್ರಾರ್ಥಿಸಿದರು. ಶ್ರೀಪಾದ ಹೆಗಡೆ ಸ್ವಾಗತಿಸಿದರು. ಪ್ರಿಯಾಂಕಾ ಹೆಗಡೆ ನಿರೂಪಿಸಿದರು.