ಅಭಿವೃದ್ಧಿಗೆ ಶ್ರಮಿಸುವ ಮೋದಿ ನಾಯಕತ್ವ ದೇಶಕ್ಕೆ ಬೇಕು-ಮಾಧುಸ್ವಾಮಿ

KannadaprabhaNewsNetwork | Published : May 6, 2024 12:35 AM

ಸಾರಾಂಶ

ಕೇವಲ ಹತ್ತು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಪಂಚದ ಮೂರನೇ ಸ್ಥಾನಕ್ಕೆ ತಲುಪುವಂತೆ ಇಡೀ ದೇಶದ ಹಿತಕ್ಕೆ ಬದ್ಧತೆಯಿಂದ ಪರಿಶ್ರಮಿಸುವ ನರೇಂದ್ರ ಮೋದಿ ಅವರಂಥ ನಾಯಕತ್ವ ಭಾರತಕ್ಕೆ ಬೇಕಾಗಿದೆಯೇ ಹೊರತು, ಪ್ರಲೋಭನೆಗಳಿಂದ ಅಧಿಕಾರಕ್ಕೆ ಬರುವ ಜನಪ್ರತಿನಿಧಿ ನಮಗೆ ಬೇಕಾಗಿಲ್ಲ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಹಾನಗಲ್ಲ: ಕೇವಲ ಹತ್ತು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಪಂಚದ ಮೂರನೇ ಸ್ಥಾನಕ್ಕೆ ತಲುಪುವಂತೆ ಇಡೀ ದೇಶದ ಹಿತಕ್ಕೆ ಬದ್ಧತೆಯಿಂದ ಪರಿಶ್ರಮಿಸುವ ನರೇಂದ್ರ ಮೋದಿ ಅವರಂಥ ನಾಯಕತ್ವ ಭಾರತಕ್ಕೆ ಬೇಕಾಗಿದೆಯೇ ಹೊರತು, ಪ್ರಲೋಭನೆಗಳಿಂದ ಅಧಿಕಾರಕ್ಕೆ ಬರುವ ಜನಪ್ರತಿನಿಧಿ ನಮಗೆ ಬೇಕಾಗಿಲ್ಲ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.ಶನಿವಾರ ಹಾನಗಲ್ಲ ತಾಲೂಕಿನ ಉಪ್ಪಣಸಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಮತದಾರರೇ ಸ್ವಾಭಿಮಾನ ಕಳೆದುಕೊಳ್ಳಬೇಡಿ. ರೈತ ಬಾಂಧವರೆ ನಿಮಗೆ ದುಡಿಯುವ ಶಕ್ತಿಯಾಗುವ ನೀರಾವರಿ ಯೋಜನೆಗಳು ಬೇಕಾಗಿವೆ. ಕಾಂಗ್ರೆಸಿಗರು ಕೈ ಒಡ್ಡುವುದನ್ನು ಕಲಿಸುತ್ತಿದ್ದಾರೆ. ಚುನಾವಣೆ ಆಧಾರಿತ ಭಾಷಣಗಳನ್ನು ಯಥೇಚ್ಛವಾಗಿ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ನೀರಾವರಿ, ವಿದ್ಯುತ್ ಶಕ್ತಿ, ಯುವಕರಿಗೆ ಉದ್ಯೋಗ, ರಸ್ತೆ, ರೈಲ್ವೆ, ಕುಡಿಯುವ ನೀರು ಇಂತಹ ಯೋಜನೆಗಳ ಬಗ್ಗೆ ಯೋಚನೆ ಇಲ್ಲ. ಈ ರಾಜ್ಯದ ಸರ್ಕಾರ ದಿವಾಳಿ ಆಗಿದೆ. ನಮಗೆ ರಕ್ಷಣೆ ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ದೊಡ್ಡ ಗುಲ್ಲು ನಡೆದಿದೆ. ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ನಾಳೆ ಯಾರು ಈ ರಾಜ್ಯದ ಮುಖ್ಯಮಂತ್ರಿ ಎಂಬ ಚಿಂತೆಯಲ್ಲಿಯೇ ಸರ್ಕಾರ ಅಲ್ಲಾಡುತ್ತಿದೆ. ಈ ಕಾಂಗ್ರೆಸ್ ಸರ್ಕಾರದಿಂದ ಈ ರಾಜ್ಯದ ಹಿತ ಕಾಯಲು ಸಾಧ್ಯವಿಲ್ಲ. ಈ ದೇಶ ಕಾಯುವ, ಅಭಿವೃದ್ಧಿಯಲ್ಲಿ ಇಡೀ ಜಗತ್ತಿಗೆ ಸವಾಲಾಗಿರುವ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚನೆಗೆ ನಾವೆಲ್ಲ ಬಿಜೆಪಿಗೆ ಮತ ನೀಡೋಣ. ದೇಶವನ್ನು ಅಭಿವೃದ್ಧಿ ಮಾಡೋಣ ಎಂದು ಮನವಿ ಮಾಡಿದರು.ಮಾಜಿ ಸಚಿವ ಮನೋಹರ ತಹಶೀಲ್ದಾರ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮನಗೌಡ ಪಾಟೀಲ, ಬಿಜೆಪಿ ಮುಖಂಡರಾದ ಬಸವರಾಜ ಹಾದಿಮನಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಘವೇಂದ್ರ ತಹಶೀಲ್ದಾರ, ಶಿವಲಿಂಗಪ್ಪ ತಲ್ಲೂರ, ಬಸವಣ್ಣೆಪ್ಪ ಬೆಂಚಳ್ಳಿ, ಅಶೋಕ ಯಮನೂರ, ಶಿವಯೋಗಿ ಮಲ್ಲಿಗಾರ, ರುದ್ರಪ್ಪ ಕಾಡಪ್ಪನವರ ಮೊದಲಾದವರು ಇದ್ದರು.ಫೋಟೋ : ೫ಎಚ್‌ಎನ್‌ಎಲ್೧ಹಾನಗಲ್ಲ ತಾಲೂಕಿನ ಉಪ್ಪಣಸಿಯಲ್ಲಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮತ ಯಾಚಿಸಿ ಮಾತನಾಡಿದರು.

Share this article