ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹರ್-ಘರ್ ತಿರಂಗಾ ಅಭಿಯಾನಕ್ಕೆ ತಮ್ಮ ನಿವಾಸದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಹಿಂದೆ ಭಾರತವನ್ನು ಕೇವಲ ಬಡ ರಾಷ್ಟ್ರ ಎಂದು ಜಗತ್ತಿನಾದ್ಯಂತ ಬಿಂಬಿಸಲಾಗುತ್ತಿತ್ತು. ಈಗ ಬಡತನ ರೇಖೆ ದಾಟಿ ಆರ್ಥಿಕವಾಗಿ ಮುನ್ನಡೆಯುತ್ತಿದೆ ಎಂದರು.
ಬ್ರಿಟೀಷರ ದಾಸ್ಯದಿಂದ ಭಾರತವನ್ನು ವಿಮೋಚನೆಗೊಳಿಸಲು ನಡೆಸಿದ ಹೋರಾಟಗಳು ಯುವಕರಿಗೆ ಪ್ರೇರಣೆ ಆಗಬೇಕು. ಸ್ವಾತಂತ್ರ್ಯ ಹೋರಾಟದಲ್ಲಿನ ಅನೇಕ ಮಹನೀಯರ ಅಪ್ರತಿಮ ತ್ಯಾಗ, ಬಲಿದಾನ, ಐತಿಹಾಸಿಕ ಕ್ಷಣಗಳ ನೆನಪಿಗಾಗಿ ಮತ್ತು ದೇಶಪ್ರೇಮದ ಜಾಗೃತಿಗಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಭಾರತ 80ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ಬ್ರಿಟಿಷರ ದಾಸ್ಯದ ವಿರುದ್ಧ ನಮ್ಮ ಹಿರಿಯರು ನಡೆಸಿದ ರಕ್ತಸಿಕ್ತ ಬಲಿದಾನದ ಹೋರಾಟಗಳನ್ನು ಜಿಲ್ಲಾ ಬಿಜೆಪಿ ವತಿಯಿಂದ ಇಂದಿನ ಯುವ ಸಮೂಹ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂದರು.ದೇಶಗಳಲ್ಲಿ ಯುದ್ಧ ನಡೆಯುವ ಸಂದರ್ಭದಲ್ಲಿ ಜಾಗತಿಕ ಮಟ್ಟದ ನಾಯಕರು ಶಾಂತಿ ಸ್ಥಾಪನೆಗಾಗಿ ಭಾರತದ ನೆರವು ಮತ್ತು ಮಧ್ಯಸ್ಥಿಕೆಯನ್ನು ಕೋರುತ್ತಿದ್ದಾರೆ. ಪ್ರಸ್ತುತ ಭಾರತವು ಬಡತನದ ರೇಖೆ ದಾಟಿ ಆರ್ಥಿಕವಾಗಿ ಮುನ್ನಡೆಯುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಸ್ವಚ್ಛಭಾರತ್ ಯೋಜನೆ ಜಾರಿಗೊಳಿಸಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಮಾತನಾಡಿ ನಮ್ಮ ದೇಶದ ಗೌರವ, ಏಕತೆ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಪ್ರತಿಯೊಬ್ಬರೂ ತಮ್ಮ ಮನೆ, ಅಂಗಡಿ, ಕಚೇರಿ ಹಾಗೂ ಸಂಸ್ಥೆಗಳಲ್ಲಿ ಗೌರವದಿಂದ ಹಾರಿಸಿ ಪ್ರಧಾನಿಗಳು ಕರೆಕೊಟ್ಟಂತೆ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ನಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ದೇಶಭಕ್ತಿಯ ಸಂದೇಶವನ್ನು ಪ್ರತಿಯೊಂದು ಮನೆಗೂ ತಲುಪಿಸಬೇಕು. ಆಗಸ್ಟ್ 13 ರಿಂದ 15ರವರೆಗೆ ಪ್ರತಿಯೊಂದು ಮನೆಯಲ್ಲಿ ತಿರಂಗಾ ಹಾರಿಸುವ ಮೂಲಕ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸೋಣ ಎಂದರು.