ಪದವೀಧರರ ಯಶಸ್ಸಿನ ಹಿಂದೆ ದೇಶದ ಪ್ರಗತಿಯಿದೆ: ಪ್ರೊ.ಎಲ್.ಎಸ್. ಶಶಿಧರ

KannadaprabhaNewsNetwork |  
Published : Aug 13, 2025, 12:30 AM IST
1 | Kannada Prabha

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದ ಅಗತ್ಯಗಳು ವಿಭಿನ್ನವಾಗಿವೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಹಿಂದೆ ಕೇವಲ ಪದವಿ ಪ್ರಮಾಣ ಪತ್ರ ಪಡೆಯುವ ಉದ್ದೇಶವಿರಬಾರದು. ನಿಮ್ಮ ಶಿಕ್ಷಣದಿಂದ ಹೊಸ ಅನ್ವೇಷಣೆಗಳು ಸಾಧ್ಯವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪದವೀಧರರ ಜ್ಞಾನ ಮತ್ತು ಯಶಸ್ಸಿನ ಹಿಂದೆ ದೇಶದ ಪ್ರಗತಿಯದೆ ಎಂಬುದನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಿ ಎಂದು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ-ಟಿಐಎಫ್ಆರ್ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ 17ನೇ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದ ಅಗತ್ಯಗಳು ವಿಭಿನ್ನವಾಗಿವೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಹಿಂದೆ ಕೇವಲ ಪದವಿ ಪ್ರಮಾಣ ಪತ್ರ ಪಡೆಯುವ ಉದ್ದೇಶವಿರಬಾರದು. ನಿಮ್ಮ ಶಿಕ್ಷಣದಿಂದ ಹೊಸ ಅನ್ವೇಷಣೆಗಳು ಸಾಧ್ಯವಾಗಬೇಕು ಎಂದರು.

ಸ್ವಾತಂತ್ರ್ಯಪೂರ್ವ ಭಾರತದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಬೇರೆಯಿತ್ತು. ಇವುಗಳಲ್ಲಿ ಇಂದು ಸಾಕಷ್ಟು ಬದಲಾವಣೆಯಾಗಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಿದೆ. ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳು ಸುಧಾರಿಸಿವೆ. ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಹೊಸ ಅನ್ವೇಷಣೆಗಳಿಂದ ಅಚ್ಚರಿಯಾಗುವಂತೆ ಬೆಳವಣಿಗೆಯನ್ನು ಸಾಧಿಸಿದೆ. ಇದೆಲ್ಲದರ ಹಿಂದೆ ಸಮಗ್ರ ರಾಷ್ಟ್ರ ನಿರ್ಮಾಣದ ಕನಸು ಇದೆ ಎಂದರು.

ಶಿಕ್ಷಣ ಪಡೆದು ಪದವೀಧರರಾಗುವ ವಿದ್ಯಾರ್ಥಿಗಳಿಗೆ ಇದೆಲ್ಲದರ ಅರಿವು ಸದಾ ಇರಬೇಕು. ಪದವಿಗಳು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ಆಯಾ ಕ್ಷೇತ್ರಗಳಲ್ಲಿ ಹೊಸ ಅನ್ವೇಷಣೆಯ ಸಾಧ್ಯತೆಗಳನ್ನು ಕಂಡುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದರು.

ಜೆಎಸ್‌ಎಸ್ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಮೌಲ್ಯಾಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಇಂದು ವಿಶ್ವವು ಕೃತಕ ಬುದ್ಧಿಮತ್ತೆಯ ಜೊತೆಯಲ್ಲಿಯೇ ಸಾಗುತ್ತಿದೆ. ವಿಜ್ಞಾನ ಮತ್ತು ಜ್ಞಾನ ಎರಡರ ಸಮತೋಲನವನ್ನು ಕಾಯ್ದುಕೊಂಡು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು. ಶಿಕ್ಷಕರು ಇವುಗಳ ಅರಿವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಾ ಔದ್ಯೋಗಿಕ ಕ್ಷೇತ್ರದಲ್ಲಿ ಮೌಲ್ಯಯುತವಾದ ನೆಲೆಯನ್ನು ಕಲ್ಪಿಸಲು ಶ್ರಮಿಸಬೇಕು ಎಂದರು.

903 ಜನರಿಗೆ ಪದವಿ:

ನೂತನ ಪದವೀಧರರಿಗೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಿಂದ ಒಟ್ಟು 903 ವಿದ್ಯಾರ್ಥಿಗಳು ಪದವೀಧರರಾದರು. ಇವರಲ್ಲಿ ಹೆಚ್ಚು ಅಂಕ ಪಡೆದ ಒಟ್ಟು 62 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು. 17 ಮಂದಿ ವಿದ್ಯಾರ್ಥಿಗಳು ವಿವಿಧ ದತ್ತಿ ಪುರಸ್ಕಾರಕ್ಕೆ ಪಾತ್ರರಾದರು.

ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ. ಪ್ರಭುಸ್ವಾಮಿ, ವಿಶ್ರಾಂತ ಕುಲಪತಿ ಡಾ.ಎಂ. ಮುನಿಯಮ್ಮ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕ್ಷೀರಾ ಶಾನುಭೋಗ್ ಮತ್ತು ಅದಿತಿ ಹೆಗ್ಡೆ ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ವಂದಿಸಿದರು. ಡಾ.ಎನ್. ರಾಜೇಂದ್ರ ಪ್ರಸಾದ್‌ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!