ದೇಶದ ಮತದಾರರ ಹಕ್ಕಿಗೆ ಜಯ ಸಿಕ್ಕಿದೆ: ಡಿಕೆಶಿ

KannadaprabhaNewsNetwork |  
Published : Oct 03, 2026, 02:00 AM IST
ಡಿಕೆಶಿ | Kannada Prabha

ಸಾರಾಂಶ

‘ಎಸ್​​ಐಆರ್‌ ನಂತರದ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ಎಎಸ್‌ಡಿಡಿಒ) ಮತ್ತಿತರ ಪಟ್ಟಿಯನ್ನು ಮರುಪರಿಶೀಲಿಸಿ, ಹೆಸರು ಬಿಟ್ಟು ಹೋದ ಅರ್ಹ ಮತದಾರರ ಹೆಸರು ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಆದೇಶ ಕೊಟ್ಟಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಎಸ್​​ಐಆರ್‌ ನಂತರದ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ಎಎಸ್‌ಡಿಡಿಒ) ಮತ್ತಿತರ ಪಟ್ಟಿಯನ್ನು ಮರುಪರಿಶೀಲಿಸಿ, ಹೆಸರು ಬಿಟ್ಟು ಹೋದ ಅರ್ಹ ಮತದಾರರ ಹೆಸರು ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಆದೇಶ ಕೊಟ್ಟಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಭೇಟಿ ಮಾಡಿದ ಬಳಿಕ ರಾತ್ರೋರಾತ್ರಿ ಹೊರಡಿಸಿದ ಆದೇಶ ಸ್ವಾಗತಿಸುತ್ತೇವೆ. ಇದು ಕಾಂಗ್ರೆಸ್‌ ಮಾತ್ರವಲ್ಲ, ಇಡೀ ದೇಶದ ಮತದಾರರ ಗೆಲುವು. ಅರ್ಹ ಮತದಾರರ ಹಕ್ಕು ಕಸಿಯುವ ಷಡ್ಯಂತ್ರ ವಿರುದ್ಧದ ಜಯ. ನಮ್ಮ ಹೋರಾಟ ಇನ್ನೂ ಮುಂದುವರೆಯಲಿದೆ ಎಂದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಸಾಮೂಹಿಕವಾಗಿ ಹೆಸರು ತೆಗೆದು ಹಾಕಿರುವ ದೂರುಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಆದೇಶ ನೀಡಿದೆ. ಫಾರ್ಮ್-7ರ ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡಬಾರದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶೇಷ ಶಿಬಿರ ಆಯೋಜಿಸಬೇಕು:

ಅಲ್ಲದೆ, ಮೊದಲ ಬಾರಿಗೆ ಮತದಾರರಾಗುವ ಯುವಕರ ಹೆಸರು ಸೇರ್ಪಡೆಗೆ ವಿಶೇಷ ಶಿಬಿರ ಆಯೋಜಿಸಬೇಕು. ಅದರಂತೆ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ. ಬಿಎಲ್​ಒ ಏನು ಮಾಡಬೇಕು, ಫಾರ್ಮ್-6 ಮತ್ತು ಫಾರ್ಮ್-7 ಹೇಗೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಬೂತ್‌ಮಟ್ಟದ ಶಿಬಿರಗಳನ್ನು ಆಯೋಜಿಸಬೇಕು. ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಜನರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕೆಂದು ಸೂಚಿಸಿದ್ದಾರೆ ಎಂದು ಶಿವಕುಮಾರ್‌ ವಿವರಣೆ ನೀಡಿದರು.ಮತಗಳ ಡಿಲೀಟ್​​ಗೆ ಬಿಜೆಪಿ ಅರ್ಜಿ, ನಾಚಿಕೆ ಸಂಗತಿ:

ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದು ಹಾಕಲು ಬಿಜೆಪಿಯವರು ಅರ್ಜಿ ನೀಡಿರುವುದು ನಾಚಿಕೆಗೇಡಿನ ಸಂಗತಿ. ಸಮುದಾಯಗಳು, ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ಇಂತಹವರು ರಾಜಕೀಯದಲ್ಲಿರಲು ನಾಲಾಯಕ್​ಗಳು ಎಂದು ಶಿವಕುಮಾರ್‌ ಕಿಡಿಕಾರಿದರು.

ಬಿಜೆಪಿಯವರಿಗೆ ಪ್ರತಿಭಟನೆ ನಡೆಸಲು ನಾಚಿಕೆಯಾಗಬೇಕು. ಸುಮಾರು 25 ಸಾವಿರ ಅರ್ಜಿಗಳನ್ನು ನೀಡಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಅವರು ಮಾಡಿರುವ ಅಪರಾಧ ಮತ್ತು ಷಡ್ಯಂತ್ರಗಳನ್ನು ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಚುನಾವಣೆ ಆಯೋಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕ್ರಿಮಿನಲ್‌ ಚಟುವಟಿಕೆ ವಿರುದ್ಧ ದೂರು ದಾಖಲಿಸಬೇಕು. ಈ ದಾಖಲೆಯನ್ನು ಹಂಚಿರುವುದಾಗಿ ಈಗಾಗಲೇ ಒಪ್ಪಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು.

ತಮಗೆ ಈ ಅಕ್ರಮದ ಬಗ್ಗೆ ತಿಳಿದಾಗ ಕಾಂಗ್ರೆಸ್ ಕಾರ್ಯಕರ್ತರ ಹೊರತಾಗಿ, ಒಂದು ವಿಶೇಷ ತಂಡ ನೇಮಿಸಿದೆ. ''''ಸಿಟಿಜನ್ಸ್ ಫೋರಂ'''' ಮತ್ತು ಹೋರಾಟಗಾರರು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ದತ್ತಾಂಶ ಸಂಗ್ರಹಿಸಿ ವರದಿ ನೀಡಿದ್ದಾರೆ. ಅದನ್ನು ನನ್ನ ಸ್ವಂತ ಮೂಲಗಳಿಂದಲೂ ಪರಿಶೀಲಿಸಿದ್ದೇನೆ. ನಾನು ತಳಮಟ್ಟದ ರಾಜಕಾರಣಿ ಎಂದು ಹೇಳಿದರು.ಮತಗಳ್ಳತನದ ಪಿತಾಮಹ ಅಂತ ಒಪ್ಪಿಕೊಂಡ ಆರ್‌.ಅಶೋಕ್‌, ಬಿವೈವಿಗೆ ಅಭಿನಂದನೆ:

ನನ್ನ ರಾಜೀನಾಮೆ ಕೇಳುವ ಮೊದಲು 25 ಸಾವಿರ ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದಾಗಿ ಬಿಜೆಪಿಯವರೇ ಒಪ್ಪಿಕೊಂಡಿದ್ದಾರೆ. ಮತಗಳ್ಳತನದ ಪಿತಾಮಹರು ತಾವೇ ಎಂದು ಒಪ್ಪಿಕೊಂಡಿರುವುದಕ್ಕೆ ಆರ್‌. ಅಶೋಕ್, ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದಿಸುವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದು ಕ್ರಿಮಿನಲ್ ಪಿತೂರಿಯ ತಪ್ಪೊಪ್ಪಿಗೆ. ಪೊಲೀಸರು ಅವರನ್ನು ಬಂಧಿಸಬೇಕು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಎಂದು ಪ್ರಶ್ನಿಸಿದರು.

ಬಿಜೆಪಿಯವರ ತಂತ್ರ, ಕುತಂತ್ರ, ಮಂತ್ರವನ್ನು ನಾನು ಬಿಚ್ಚಿಟ್ಟಿದ್ದೇನೆ. ಚುನಾವಣಾ ಆಯೋಗದವರು ದಡ್ಡರಲ್ಲ. 50 ಲಕ್ಷ ಮತಗಳೋ, ಒಂದು ಮತವೋ ಒಟ್ಟಿನಲ್ಲಿ ಅವರ ಬಂಡವಾಳವನ್ನು ಬಿಚ್ಚಿಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಿಗೆ ಬರಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು