ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಧನ್ವಂತರಿ ಜಯಂತಿ ಅಂಗವಾಗಿ ತಾಲೂಕಿನ ಮದೇಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಔಷಧಿ ಸಸ್ಯಗಳ ಪ್ರಾತ್ಯಕ್ಷತೆ ಹಾಗೂ ಉಪಯೋಗದ ಕುರಿತು ನುರಿತ ಪಾರಂಪಕರಿಕ ವೈದ್ಯರಿಂದ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರ ಇಂದು ದೊಡ್ಡ ಮಾಫಿಯವಾಗಿದೆ. ದುಡ್ಡಿದ್ದವರಿಗೆ ಮಾತ್ರ ಆರೋಗ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ಆಸ್ಪತ್ರೆಗಳು ವ್ಯವಹಾರಿಕವಾಗಿವೆ. ಆರೋಗ್ಯದಲ್ಲಿ ವ್ಯವಹಾರ ಬೇಡ. ಬಾಬಾ ಸಾಹೇಬ ಡಾ.ಅಂಬೇಡ್ಕರ್‌ರ ಪರಿಕಲ್ಪನೆ ಈ ದೇಶದ ನೆಲ, ಜಲ, ಆರೋಗ್ಯ ಮತ್ತು ಶಿಕ್ಷಣ ರಾಷ್ಟ್ರೀಕರಣ ಆಗಬೇಕು, ಉಚಿತ ಆಗಬೇಕು ಎಂಬುದಾಗಿತ್ತು. ಇದು ಸಾಧ್ಯವಾಗದೇ ಹೋಗಿರುವುದು ವಿಷಾಧಕರ ಸಂಗತಿ ಎಂದರು.ವಿದ್ಯಾಭ್ಯಾಸ ಹಾಗೂ ಆರೋಗ್ಯ ಈ ಎರಡು ವಿಚಾರಗಳಿಗೆ ಜನರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಸಾಲ ಮಾಡಿಯಾದರೂ ಚಿಕಿತ್ಸೆಗೆ ಹಣ ಖರ್ಚು ಮಾಡುತ್ತಾರೆ. ಆದರೆ ಇಂದು ಚಿಕ್ಕ ಕಾಯಿಲೆಗೂ ರಕ್ತ ಪರೀಕ್ಷೆ, ಎಕ್ಸರೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿದಂತೆ ಮತ್ತಿತರ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಆದರೆ ಹಿಂದೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ನಾಡಿ ನೋಡಿ ಏನು ಕಾಯಿಲೆ ಎಂದು ಹೇಳುತ್ತಿದ್ದರು. ಯಾವುದೇ ದುಂದು ವೆಚ್ಚವಿಲ್ಲದೆ ಪಾರಂಪರಿಕ ವೈದ್ಯರು ಸಮಾಜವನ್ನು ಆರೋಗ್ಯಕರವಾಗಿಟ್ಟಿದ್ದರು. ಅಂತಹ ಪಾರಂಪರಿಕ ವೈದ್ಯರಿಗೆ ನೂರಾರು ಕಷ್ಟಗಳಿವೆ. ಸರಕಾರ ಅವರನ್ನು ಗುರುತಿಸಬೇಕಿದೆ. ಕೆಲವರು ನಕಲಿ ಪಾರಂಪರಿಕ ವೈದ್ಯರಿಂದ ನಿಜವಾದ ಪಾರಂಪರಿಕ ವೈದ್ಯರಿಗೆ ಧಕ್ಕೆಯಾಗುತ್ತಿದೆ. ಸರಕಾರ ಅರ್ಹರನ್ನು ಗುರುತಿಸಿ ಅವರಿಗೆ ಗೌರವ ಧನ ನೀಡಬೇಕು. ಮನೆ ಮದ್ದಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗಲಿವೆ ಎಂದರು.
ಮೆದೇಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್.ಪಾತಣ್ಣ ಮಾತನಾಡಿ, ವಂಶ ಪಾರಂಪರ್ಯವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ, ಈ ಪದ್ಧತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ತಿಳಿಸಿದರು.