ಬಾಲಕಿ ಮೇಲೆ ಅತ್ಯಾಚಾರ ಅಪರಾಧಿಗೆ ಕಠಿಣ ಶಿಕ್ಷೆ

KannadaprabhaNewsNetwork | Updated : Oct 07 2023, 12:37 PM IST

ಸಾರಾಂಶ

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಪ್ರೀತಿಸುವ ನಾಟಕ ಮಾಡಿ, ಮದುವೆ ಆಗುವುದಾಗಿ ನಂಬಿಸಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ. ಅಮರನಾಥ ಮೈಲಿ ಶಿಕ್ಷೆಗೆ ಒಳಗಾದ ಅಪರಾಧಿ. ಬಾಲಕಿಯೊಬ್ಬಳನ್ನು ಪ್ರೀತಿಸಿ, ಅತ್ಯಾಚಾರ ಮಾಡಿ, ಅಪಹರಣ ಮಾಡಿದ್ದು, ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡು ಬಾಲಕಿ ಗರ್ಭಧರಿಸಲು ಕಾರಣನಾದ ಹಿನ್ನೆಲೆಯಲ್ಲಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಹುನಗುಂದ ಪೊಲೀಸ್ ಉಪಾಧೀಕ್ಷಕ ಚಂದ್ರಕಾಂತ ನಂದರಡ್ಡಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಆರೋಪಿಗೆ ಸೆಕ್ಷನ್ 4 ಮತ್ತು 6 ಪೋಕ್ಸೋದಡಿ 20 ವರ್ಷ ಕಠಿಣ ಜೈಲುಶಿಕ್ಷೆ, ₹10 ಸಾವಿರ ದಂಡ, ತಪ್ಪಿದಲ್ಲಿ ಇನ್ನು 1 ವರ್ಷ ಸಾದಾ ಜೈಲು ಶಿಕ್ಷೆ, ಕಲಂ 363 ಐಪಿಸಿ ಅಪರಾಧಕ್ಕೆ 3 ವರ್ಷ ಸಾದಾ ಜೈಲು, ₹3 ಸಾವಿರ ದಂಡ ತಪ್ಪಿದಲ್ಲಿ 1 ತಿಂಗಳ ಸಾದಾ ಜೈಲುವಾಸ, ಕಲಂ 366ರಡಿ 3 ವರ್ಷ ಸಾದಾ ಜೈಲು ₹3 ಸಾವಿರ ದಂಡ ಹಾಗೂ ಸೆ.3(2) (ವಿಎ) ಎಸ್ಸಿ ಮತ್ತು ಎಸ್ಟಿ (ಪಿಒಎ) ಅಡಿ 10 ವರ್ಷ ಕಠಿಣ ಜೈಲುವಾಸ ₹10 ಸಾವಿರ ದಂಡ ವಿಧಿಸಿದೆ. ದಂಡ ಕೊಡಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ನೀಡುವಂತೆ ಆದೇಶಿಸಿದೆ. ನೊಂದ ಬಾಲಕಿಗೆ ₹4 ಲಕ್ಷ ಪರಿಹಾರ ಧನವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟೆ ಇವರು ಸಹಾಯಧನವಾಗಿ ಕೊಡುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಎಸ್.ಆರ್.ಹೊಸಮಠ ಸಾಕ್ಷಿಗಳನ್ನು ಪ್ರಸ್ತುತಪಡಿಸಿ ವಾದ ಮಂಡಿಸಿದ್ದರು.

Share this article