ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ

KannadaprabhaNewsNetwork |  
Published : Jul 06, 2026, 02:30 AM IST
ಕೈದಿಗಳು ತಯಾರಿಸಿದ ಕಲಾಕೃತಿಗಳು | Kannada Prabha

ಸಾರಾಂಶ

ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಈಗ ಸುಂದರ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸುವ ಮೂಲಕ ಸೃಜನಶೀಲತೆಯತ್ತ ಮುಖ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಈಗ ಸುಂದರ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸುವ ಮೂಲಕ ಸೃಜನಶೀಲತೆಯತ್ತ ಮುಖ ಮಾಡಿದ್ದಾರೆ.

ಇಲ್ಲಿನ 25 ಕೈದಿಗಳಿಗೆ ಕರಕುಶಲ ವಸ್ತುಗಳ ತಯಾರಿಕೆ ಕುರಿತಂತೆ ತರಬೇತಿ ನೀಡಿದ್ದು, ಇವರು ಜೈಲಿನ ಚೌಕಟ್ಟಿನೊಳಗೇ ತಮ್ಮಲ್ಲಿ ಅಡಗಿರುವ ಕಲೆ ಮತ್ತು ಕೌಶಲ್ಯ ಜಾಗೃತಗೊಳಿಸಿಕೊಳ್ಳುತ್ತಿದ್ದಾರೆ. ಪರಿಸರ ಸ್ನೇಹಿ ಕೈಚೀಲ, ಗೃಹೋಪಯೋಗಿ ವಸ್ತುಗಳು, ಮಣ್ಣಿನ ಕಲಾಕೃತಿಗಳು ಹಾಗೂ ಆಕರ್ಷಕ ವರ್ಣಚಿತ್ರ ತಯಾರಿಸುತ್ತಿದ್ದಾರೆ. ಇವರು ಸಿದ್ಧಪಡಿಸುವ ವಸ್ತುಗಳು ಗುಣಮಟ್ಟದಲ್ಲಿ ಮಾರುಕಟ್ಟೆಯ ಇತರೆ ಉತ್ಪನ್ನಗಳಿಗೆ ಪೈಪೋಟಿ ನೀಡುವಂತಿವೆ.

ಈ ಸುಧಾರಣಾ ಪ್ರಕ್ರಿಯೆಯಿಂದಾಗಿ ಕೈದಿಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತಿದ್ದು, ನಿರಂತರ ಕೆಲಸದಲ್ಲಿ ತೊಡಗುವುದರಿಂದ ಅವರ ಮಾನಸಿಕ ಒತ್ತಡ, ಖಿನ್ನತೆ ಮತ್ತು ಆಕ್ರೋಶ ಕಡಿಮೆಯಾಗುತ್ತಿದೆ. ಕೈದಿಗಳು ತಯಾರಿಸುವ ಈ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇದರಿಂದ ಅವರು ಜೈಲಿನಲ್ಲಿದ್ದೂ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗಲು ಸಾಧ್ಯವಾಗುತ್ತದೆ ಅಲ್ಲದೇ ಅವರು ಜೈಲಿನಿಂದ ಬಿಡುಗಡೆಯಾದಾಗ ಶೂನ್ಯದಿಂದ ಹೊಸ ಜೀವನ ಆರಂಭಿಸಲು ಆರ್ಥಿಕ ಭದ್ರತೆ ಒದಗಿಸುತ್ತದೆ. ಜೈಲಿನಲ್ಲಿ ಕಲಿತ ಕರಕುಶಲ ಕೌಶಲ್ಯಗಳು ಶಿಕ್ಷೆ ಮುಗಿದ ನಂತರ ಅವರ ಅಪರಾಧದ ಕಪ್ಪು ಚುಕ್ಕೆಯನ್ನು ಅಳಿಸಿ, ಸಮಾಜದಲ್ಲಿ ಗೌರವಾನ್ವಿತವಾಗಿ ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತವೆ. ಇಂತಹ ಸೃಜನಾತ್ಮಕ ಸುಧಾರಣೆಗಳು ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣವಾಗಲಿದೆ.

ಜಿಲ್ಲಾ ಕಾರಾಗೃಹದ ಈ ಹೆಜ್ಜೆಯು ಕೈದಿಗಳು ತಯಾರಿಸುವ ವಸ್ತುಗಳ ಉತ್ಪಾದನೆಯಾಗದೇ, ಅವರ ಮನಃ ಪರಿವರ್ತನೆಯ ಸಂಕೇತವಾಗಿದೆ. ಕಬ್ಬಿಣದ ಸರಳುಗಳ ಹಿಂದೆಯೂ ಸೃಜನಶೀಲ ಮನಸ್ಸುಗಳು ಧನಾತ್ಮಕವಾಗಿ ಯೋಚಿಸಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿದೆ.ಇಲ್ಲಿ ತಯಾರಾದ ವಸ್ತುಗಳ ಮಾರಾಟದ ಮೊತ್ತದ ನಿರ್ದಿಷ್ಟ ಭಾಗವನ್ನು ಕೈದಿಗಳಿಗೆ ನೀಡುತ್ತಿದ್ದು, ಈ ಮೊತ್ತವು ಇಲ್ಲಿಂದ ಬಿಡುಗಡೆಯಾದ ನಂತರ ಅವರು ಸ್ವಾವಲಂಬಿ ಬದುಕು ಸಾಗಿಸಲು, ಸ್ವ ಉದ್ಯಮಕ್ಕೆ ಆರಂಭಿಕ ಬಂಡವಾಳವಾಗಿ ತೊಡಗಿಸಲು ನೆರವಾಗಲಿದೆ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಹೇಮಾವತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ
ಮಾಲೀಕರ ನಿರ್ಲಕ್ಷ್ಯ: ಬೀದಿಗೆ ಬಿದ್ದ ದನಗಳು